ಗುರಿ ಸಾಧಿಸಲು ಸದೃಢ ಮನಸ್ಸು ಅಗತ್ಯ: ಡಾ.ಸಿ.ವೆಂಕಟೇಶ್ ಅಭಿಮತ

21
Published on

ಮೈಸೂರು: ಮಾನಸಿಕ ಸದೃಢತೆ ಇಲ್ಲದಿದ್ದರೆ, ದೇಹ ಎಷ್ಟೇ ಬಲಿಷ್ಠವಾಗಿದ್ದರೂ ಗೆಲುವು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾವು ಎಂತಹ ಕಠಿಣ ಸಂದರ್ಭಗಳಲ್ಲೂ ಮನಸ್ಸಿನಲ್ಲಿ ಸೋಲೊಪ್ಪಿಕೊಳ್ಳಬಾರದು ಎಂದು ಮೈಸೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ನಿರ್ದೇಶಕ ಡಾ.ಸಿ.ವೆಂಕಟೇಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2023- 24ನೇ ಶೈಕ್ಷಣಿಕ ಸಾಲಿನ ಕಲಾ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಜೀವನದಲ್ಲಿ ಯಾವುದಾದರೊಂದು ಗುರಿ ಮುಖ್ಯ. ಅಲ್ಲದೇ ಆ ಗುರಿ ಸಾಧಿಸಲು ಸದೃಢ ಮನಸ್ಸು ಬೇಕು. ಮಾನಸಿಕ ಸದೃಢತೆಯಿಲ್ಲದಿದ್ದರೆ, ದೇಹ ಎಷ್ಟೇ ಬಲಿಷ್ಠವಾಗಿದ್ದರೂ ಗೆಲುವು ಸಾಧ್ಯವಾಗುವುದಿಲ್ಲ. ಆದ್ದರಿಂದ ಸತ್ಕಾರ್ಯ ಮಾಡಲು ದೃಢಸಂಕಲ್ಪ ಮಾಡಿ ಎಂದು ಸಲಹೆ ನೀಡಿದರು.
ಅಡ್ಡದಾರಿಗಳನ್ನು ಬಳಸಿಕೊಂಡು ಕ್ರೀಡೆಯಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪ್ರಯತ್ನಿಸುವುದಕ್ಕಿಂತ ಒಂದು ಕ್ಷೇತ್ರದಲ್ಲಿ ಸತತ ಪ್ರಯತ್ನ ಮಾಡುವುದು ಉತ್ತಮ. ಭವಿಷ್ಯ ಜೀವನದ ದೃಷ್ಟಿಯಿಂದ ಕ್ರೀಡೆ ಮತ್ತು ಶಿಕ್ಷಣ ಎರಡನ್ನೂ ಸಮಾನವಾಗಿ ಪರಿಗಣಿಸುವುದು ಮುಖ್ಯ ಎಂದರು.
ವಿಜಯವಾಣಿ ಪತ್ರಿಕೆ ಮುಖ್ಯ ಉಪ ಸಂಪಾದಕ ಎ.ಆರ್. ರಘುರಾಂ ಮಾತನಾಡಿ, ಶಿಕ್ಷಣವೆಂದರೆ ಕೇವಲ ಅಕ್ಷರ ಜ್ಞಾನವಲ್ಲ. ಬದ್ಧತೆ, ಪ್ರೀತಿ, ವಿಶ್ವಾಸ, ಅಂತಃಕರಣ, ಅನುಕಂಪ, ಸಾಮಾಜಕ್ಕೆ ಏನಾದರೂ ಕೊಡುಗೆ ನೀಡುವಂಥ ಗುಣಗಳು ಬೆಳೆಯುವುದು ಮನೆಯಲ್ಲಿ. ಉತ್ತಮ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ತಾಯಿ ಮುಖ್ಯ ಪಾತ್ರ ವಹಿಸುತ್ತಾಳೆ ಎಂದು ಹೇಳಿದರು.
ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಿಕರು ಇದನ್ನು ಮನಗಂಡದ್ದರ ಫಲವಾಗಿ ಇಂದಿಗೂ ನಮ್ಮ ದೇಶದಲ್ಲಿ ‘ಮಾತೃ ದೇವೋಭವ’ ಎಂದು ತಾಯಿಯನ್ನು ಪೂಜಿಸಲಾಗುತ್ತದೆ. ಜಗತ್ತಿನ ಎಲ್ಲ ದೇಶಗಳು ತಮ್ಮ ನಾಡನ್ನು ತಂದೆಯೆಂದು ಕಾಣುತ್ತವೆ. ಆದರೆ ತಾಯಿಯೆಂದು ನಾಡನ್ನು ಆರಾಧಿಸುವ ಏಕೈಕ ರಾಷ್ಟ್ರ ಭಾರತ ಮಾತ್ರ ಎಂದು ಹೇಳಿದರು.
ಹಿಂದೆ ಬ್ರಿಟಿಷರು ಭಾರತವನ್ನು, ಅದರ ಸಂಪತ್ತನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಇಲ್ಲಿದ್ದ ಗುರುಕುಲ ಶಿಕ್ಷಣ ಪದ್ಧತಿಯನ್ನು ನಾಶ ಮಾಡಿದರು. ಇಂದು ಇದೇ ಕೆಲಸವನ್ನು ವಿದ್ಯಾರ್ಥಿಗಳ ಕೈಸೇರಿರುವ ಮೊಬೈಲ್ ಫೋನಿನ ಆ್ಯಪ್‌ಗಳು ಮಾಡುತ್ತಿವೆ. ಇದನ್ನು ಅರಿತುಕೊಂಡು ವಿದ್ಯಾರ್ಥಿಗಳು ಜವಾಬ್ದಾರಿಯುತ ಪ್ರಜೆಗಳಾಗುವತ್ತ ಶ್ರಮಿಸಬೇಕು. ಇದಕ್ಕೆ ತಾಯಿ ಮತ್ತು ಗುರು ನೀಡುವ ಸಂಸ್ಕಾರ ಬಹಳ ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ ಮಾತನಾಡಿ, ನಮ್ಮನ್ನು ಪೋಷಿಸಿ ಬೆಳೆಸಿದ ವ್ಯವಸ್ಥೆಯನ್ನು ಕಡೆಗಣಿಸಿ ಕುಲ್ಲಕ ಆಮಿಷಗಳಿಗೆ ಮಣಿದು ಬೇರೆ ವ್ಯವಸ್ಥೆಗಳನ್ನು ಆಶ್ರಯಿಸಬಾರದು. ಬೇರೆ ಯಾವುದೇ ದೇಶದಲ್ಲಿ ಇಲ್ಲದ ಸಂಸ್ಕೃತಿ, ಸಂಸ್ಕಾರ ಭಾರತದ ನೆಲದಲ್ಲಿದೆ. ಇದಕ್ಕೆ ಕಾರಣ ನಮ್ಮ ಋಷಿ-ಮುನಿಗಳು ತೋರಿಸಿಕೊಟ್ಟಿರುವ ಜೀವನ ಪದ್ಧತಿ. ವಿದ್ಯಾರ್ಥಿಗಳು ಸಾತ್ವಿಕ ಗುಣಗಳನ್ನು ಬೆಳೆಸಿಕೊಂಡು ಸತ್ಪ್ರಜೆಗಳಾಗಿ ಬದುಕಬೇಕು. ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಜೆಎಸ್‌ಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್. ಸೋಮಶೇಖರ, ಕ್ರೀಡಾ ಸಮಿತಿ ಸಂಚಾಲಕರಾದ ದೈಹಿಕ ಶಿಕ್ಷಣ ಉಪನ್ಯಾಸಕ ಟಿ. ಅರವಿಂದ್ ಇತರರು ಇದ್ದರು.
ವಿವಿಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಪ್ರಸಕ್ತ ಶೈಕ್ಷಣಿಕ ಸಾಲಿನ ಅಂತ್ಯದಲ್ಲಿ ನಿವೃತ್ತಿ ಹೊಂದಲಿರುವ ವಾಣಿಜ್ಯಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕ ಎಸ್. ಎಂ. ದಾಸ್ತಿಕೊಪ್ಪ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net