

ಮೈಸೂರು: ಅಭಿವೃದ್ಧಿಯ ದಿಸೆಯಲ್ಲಿ ನಿಧಾನಗತಿಯಲ್ಲಿ ದೇಶ ಬೆಳವಣಿಗೆ ಹೊಂದುತ್ತಿದ್ದರೂ ಬಡತನ, ನಿರುದ್ಯೋಗ, ಅಸಮಾನತೆ, ಅನಕ್ಷರತೆಯಂತಹ ಸಮಸ್ಯೆಗಳು ಕಡಿಮೆಯಾಗಿಲ್ಲ ಎಂದು ಆರ್ಥಿಕ ತಜ್ಞ ಪ್ರೊ.ವಿ.ಕೆ ನಟರಾಜ್ ಕಳವಳ ವ್ಯಕ್ತಪಡಿಸಿದರು.
ಡಾ. ವಿಜಯಲಕ್ಷ್ಮೀ ಬಸವರಾಜ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಪ್ರಗತಿ ಸದಾ ಒಳಿತೇ..?’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಎಲ್ಲರೂ ಸಮಾನರು. ಆದರೆ ಅಭಿವೃದ್ಧಿ, ಆರ್ಥಿಕತೆ ವಿಚಾರದಲ್ಲಿ ಈ ಮಾತು ಅಕ್ಷರಶಃ ಸುಳ್ಳು. ಕೃಷಿ, ಹಾಲು ಉತ್ಪಾದನೆ ತಗ್ಗಿದೆ. ಜತೆಗೆ ಕಚ್ಚಾ ತೈಲಗಳು ದೊರಕುವುದೇ ಕಡಿಮೆಯಾಗಿದೆ ಎಂದು ತಿಳಿಸಿದರು.
ಬಲವಾದ ಅರ್ಥವ್ಯವಸ್ಥೆಯಿಂದಲೇ ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯ. ಇದೇ ಸುಸ್ಥಿರ ಅಭಿವೃದ್ಧಿಯನ್ನು ಅಳೆಯುವ ಮಾಪನ ಎಂದರು
ದೇಶದ ಅಭಿವೃದ್ಧಿ, ಆರ್ಥಿಕತೆ, ಸಮಸ್ಯೆಗಳ ಕುರಿತು ಮಾತನಾಡುವವರು ಮತ್ತು ಆಲೋಚಿಸುವವರು ಕಡಿಮೆ. ದೇಶದ ಪ್ರಗತಿಗೆ ಜನಸಂಖ್ಯೆ ಮಾರಕವಾಗಿದೆ. ದೇಶವು ಇಡೀ ಪ್ರಪಂಚದಲ್ಲೇ ಅಧಿಕ ಜನಸಂಖ್ಯೆ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೃಷಿ, ಆಹಾರ ಪದಾರ್ಥಗಳ ಉತ್ಪಾದನಾ ಮಟ್ಟ ಕುಂಠಿತವಾಗುತ್ತಿದೆ. ಆದ್ದರಿಂದ ಅಭಿವೃದ್ಧಿ ಸದಾ ಒಳಿತಾಗಿರಬೇಕು. ಅಭಿವೃದ್ಧಿಯು ಈಗ ಮರೀಚಿಕೆಯಾಗಿದೆ ಎಂದರು.
ಆಯಿಷ್ ನಿರ್ದೇಶಕ ಡಾ. ಪುಷ್ಪಾವತಿ, ಟ್ರಸ್ಟ್‌ನ ಡಾ. ಬಸವರಾಜ್, ಪ್ರತಿಭಾ ಕಾರಂತ್, ಸುದರ್ಶನ್, ವಿಭಾ, ಉಮಾಪತಿ ಇನ್ನಿತರರಿದ್ದರು.