ಪುಲಿಕೇಶಿನಗರ ಕ್ಷೇತ್ರದಲ್ಲಿ ನಾಗರಿಕ ಸಮಸ್ಯೆಗಳ ಸರಮಾಲೆ

bad road
Published on

ಆರ್​​.ತುಳಸಿಕುಮಾರ್​
ಬೆಂಗಳೂರು: ಮಹಾನಗರದಲ್ಲಿರುವ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಅತೀ ಹಿಂದುಳಿದ ಕ್ಷೇತ್ರವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಪುಲಿಕೇಶನಗರ ಎಲ್ಲೆಡೆ ನಾಗರಿಕರ ಸಮಸ್ಯೆಗಳು ಬೃಹದಾಕಾರವಾಗಿ ಸಾರ್ವಜನಿಕರನ್ನು ಕಾಡುತ್ತಿದೆ. ಅಭಿವೃದ್ಧಿ ಬೆಳಕು ಕಾಣದ ಇಲ್ಲಿ ಬೆರಳೆಣಿಕೆಯಷ್ಟು ಬಡಾವಣೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಸಮಸ್ಯೆಗಳನ್ನು ಹೊದ್ದು ಮಲಗಿವೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿರುವ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಕ್ಷೇತ್ರವು ಕಳಾಹೀನವಾಗಿದೆ.

ವಿಧಾನಸೌಧದಿಂದ ಕೇವಲ 4-5 ಕಿ.ಮೀ. ಅಂತರದಲ್ಲಿದ್ದರೂ, ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಜನರಿಗೆ ಕನಿಷ್ಠ ಮೂಲಸೌಕರ್ಯ ಇಲ್ಲದೆ ಇಡೀ ಪ್ರದೇಶ ಕುಗ್ರಾಮದಂತಿದೆ. ಕ್ಷೇತ್ರದಲ್ಲಿ ಬಹುತೇಕ ಮಂದಿ ಬಡ ವರ್ಗಕ್ಕೆ ಸೇರಿದವರಾಗಿದ್ದು, ಸೌಲಭ್ಯಗಳನ್ನು ಪಡೆಯಲು ಪರದಾಡುತ್ತಿದ್ದಾರೆ. ಇಡೀ ಕ್ಷೇತ್ರವನ್ನು ಪ್ರದಕ್ಷಿಣೆ ಹಾಕಿದರೂ ಉತ್ತಮ ಸೌಕರ್ಯವುಳ್ಳ ಒಂದು ಲೇಔಟ್ ಕೂಡ ಕಾಣಸಿಗದು. ಬದಲಾಗಿ ಅರೆಬರೆ ಸೌಲಭ್ಯದಲ್ಲೇ ಜನರು ಬದುಕು ಸವೆಸಬೇಕಾಗಿದೆ.

ಜನದಟ್ಟಣೆ ಉಳ್ಳ ಈ ಕ್ಷೇತ್ರದಲ್ಲಿ ನಾಗರಿಕ ಸೌಲಭ್ಯಗಳ ಕೊರತೆ ಸಾಕಷ್ಟಿದೆ. ಕುಡಿಯುವ ನೀರು, ರಸ್ತೆ, ಬೀದಿ ದೀಪ, ಚರಂಡಿ, ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಪಾರ್ಕ್, ಆಟದ ಮೈದಾನ, ಗ್ರಂಥಾಲಯ, ಆಸ್ಪತ್ರೆಗಳ ಕೊರತೆ ಸಾಕಷ್ಟಿದೆ. ಒತ್ತೊತ್ತಾಗಿ ಮನೆಗಳು ನಿರ್ಮಾಣವಾಗಿರುವ ಕಾರಣ ರಸ್ತೆಗಳು ಗಲ್ಲಿಗಳಂತೆ. ಕ್ಷೇತ್ರದೊಳಗೆ ಹಾದುಹೋಗಿರುವ ಮಳೆನೀರುಗಾಲುವೆ ದುರ್ವಾಸನೆ ಬೀರುವುದಲ್ಲದೆ ಸೊಳ್ಳೆ ಉತ್ಪತ್ತಿ ಕೇಂದ್ರಗಳಾಗಿ ಮಾರ್ಪಟ್ಟಿವೆ. ಒಂದರರ್ಥದಲ್ಲಿ ರಾಜಕಾಲುವೆಗಳನ್ನು ಇಲ್ಲಿನವರು ‘ಡಸ್ಟ್‌ಬಿನ್’ಗಳಾಗಿ ಮಾರ್ಪಡಿಸಿಕೊಂಡಿದ್ದಾರೆ. ಈ ಕಾಲುವೆಗಳಿಗೆ ತಡೆಗೋಡೆಗೆ ಮನೆಗಳನ್ನು ಕಟ್ಟಿಕೊಂಡಿರುವ ಜನರು ಕಸವನ್ನು ಅಲ್ಲಿಯೇ ಬಿಸಾಡುವುದರಿಂದ ಹೂಳು ತುಂಬಿ ತುಳುಕುತ್ತಿದೆ. ಚರಂಡಿಗಳಲ್ಲಿ ಹೂಳು ತೆಗೆಯದ ಕಾರಣ ಮಳೆ ಬಂದಲ್ಲಿ ಕೊಳಚೆನೀರು ರಸ್ತೆಯಲ್ಲೇ ಹರಿಯುತ್ತಿರುತ್ತದೆ. ಎಲ್ಲೆಡೆ ನೈರ್ಮಲ್ಯದ್ದೇ ಬೃಹದಾಕಾರವಾಗಿ ಕಾಣಿಸುತ್ತದೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಶಾಸಕ, ಕಾರ್ಪೊರೇಟರ್ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದವರೂ, ಈವರೆಗೂ ಪರಿಹಾರ ಸೂಚಿಸಿಲ್ಲ ಎಂದು ಕ್ಷೇತ್ರದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಗವಾರ-ಟ್ಯಾನರಿ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಾರಣ ಟ್ರಾಫಿಕ್ ಹಳಿತಪ್ಪಿದೆ. ಕಾಮಗಾರಿಯಿಂದ ಏಳುವ ಧೂಳು ರಸ್ತೆಯೆಲ್ಲೆಲ್ಲ ಆವರಿಸಿ ಸವಾರರನ್ನು ಹೈರಾಣರನ್ನಾಗಿಸುತ್ತಿದೆ. ಗುಂಡಿಗಳು ಬಿದ್ದಿದ್ದರೂ ಅವುಗಳನ್ನು ದುರಸ್ತಿಪಡಿಸುವ ಕೆಲಸ ಆಗಿಲ್ಲ. ಒಳ ಭಾಗದಲ್ಲಿರುವ ಬಡಾವಣೆಗಳನ್ನು ತಲುಪಲು ಬಿಎಂಟಿಸಿ ಮಿನಿ ಬಸ್‌ಗಳನ್ನು ಓಡಿಸಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ರಸ್ತೆ ಬದಿಯೇ ಕಸದ ರಾಶಿ:

ಪುಲಿಕೇಶಿನಗರ ಕ್ಷೇತ್ರದಲ್ಲಿ ಕಾವಲ್‌ಬೈರಸಂದ್ರ, ಕುಶಾಲನಗರ, ಮುನೇಶ್ವರನಗರ, ದೇವರಜೀವನಹಳ್ಳಿ, ಎಸ್.ಕೆ.ಗಾರ್ಡನ್, ಪುಲಿಕೇಶಿನಗರ ಹಾಗೂ ಸಗಾಯಪುರ ವಾರ್ಡ್‌ಗಳಿವೆ. ಈ ಪೈಕಿ ಕಾವಲ್‌ಬೈರಸಂದ್ರ ಹಾಗೂ ಪುಲಿಕೇಶಿನಗರ ಪ್ರದೇಶಗಳಲ್ಲಿ ಒಂದಿಷ್ಟು ಅಭಿವೃದ್ಧಿ ಕಂಡಿದೆ. ಕೆಲಮಟ್ಟಿಗೆ ನಾಗರಿಕ ಸೌಲಭ್ಯಗಳು ಜನರ ಕೈಗೆಟುಕಿದೆ. ಆದರೆ, ಉಳಿದ ವಾರ್ಡ್‌ಗಳಲ್ಲಿ ಹಲವು ಸಮಸ್ಯೆಗಳು ತಾಂಡವವಾಡುತ್ತಿದೆ. ಕುಶಾಲನಗರ, ಮುನೇಶ್ವರನಗರ, ದೇವರಜೀವನಹಳ್ಳಿ ವಾಡ್‌ಗಳಲ್ಲಿ ಜನದಟ್ಟಣೆಯಿಂದಾಗಿ ಸೌಲಭ್ಯ ಕಲ್ಪಿಸಲು ಜಾಗವೇ ಇಲ್ಲ. ಇಲ್ಲೆಲ್ಲ ಮರಗಿಡಗಳು ಇಲ್ಲದ ಕಾರಣ ಬೇಸಿಗೆಯಲ್ಲಿ ಉಸಿರಾಡಲು ಜನರು ಕಷ್ಟಪಡುವಂತಾಗಿದೆ. ಖಾಲಿ ಸೈಟ್‌ಗಳು ಕಸ ಸುರಿಯುವ ಬ್ಲಾಕ್ ಸ್ಪಾಟ್‌ಗಳಾಗಿವೆ. ತಿಂಗಳು ಕಳೆದರೂ ರಸ್ತೆಬದಿ ಬಿದ್ದಿರುವ ಕಸದ ರಾಶಿ ತೆಗೆಯಲು ಪಾಲಿಕೆಯವರು ಇತ್ತ ಧಾವಿಸುತ್ತಿಲ್ಲ. ಪರಿಣಾಮ ಕಸ ರಸ್ತೆಗೆ ಹರಡಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಶಾಂಪುರ ನಿವಾಸಿಗಳು ‘ವಿಜಯವಾಣಿ’ಗೆ ದೂರಿದರು.

ನೀರಿಗೆ ಹಾಹಾಕಾರ:

ಪುಲಿಕೇಶಿನಗರ ಕ್ಷೇತ್ರದ ಜನಸಂಖ್ಯೆಗೆ ಅನುಗುನವಾಗಿ ಕಾವೇರಿ ನೀರು ಪೂರೈಕೆ ಆಗದ ಕಾರಣ ಜನರು ಸಮಸ್ಯೆಗೆ ಒಳಗಾಗಿದ್ದಾರೆ. ಸಮರ್ಪಕವಾದ ಕೊಳವೆ ಸಂಪರ್ಕ ಇಲ್ಲದ ಕಾರಣ ಸರಿಯಾಗಿ ನೀರು ಸರಬರಾಜಾಗುತ್ತಿಲ್ಲ. ಚುನಾವಣೆ ವೇಳೆ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಓಟು ಪಡೆದಿದ್ದ ಶಾಸಕರಿಂದ ಇನ್ನೂ ಭರವಸೆ ಈಡೇರಿಲ್ಲ. ಇದರಿಂದಾಗಿ ಬೇಸಿಗೆಯಲ್ಲಿ ಹಣ ಪಾವತಿಸಿ ಖಾಸಗಿಯವರಿಂದ ನೀರು ಖರೀದಿಸಬೇಕಾದ ಸ್ಥಿತಿ ಇದೆ. ಬೋರ್‌ವೆಲ್ ನೀರು ಸಮರ್ಪಕವಾಗಿಲ್ಲದ ಕಾರಣ ನಮ್ಮ ಗೋಳು ಯಾರಿಗೂ ಬೇಡ ಎಂದು ಡಿ.ಜೆ.ಹಳ್ಳಿ, ಮುನೇಶ್ವರನಗರ, ಕುಶಾಲನಗರ ವಾರ್ಡ್ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಫುಟ್‌ಪಾತ್ ಕಾಣೆ?:

ಇಡೀ ಪುಲಿಕೇಶಿನಗರ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ರಸ್ತೆಗಳಲ್ಲಿ ಮಾತ್ರ ಸಂಚಾರಕ್ಕೆ ಯೋಗ್ಯವಾಗಿವೆ. ಒಳ ರಸ್ತೆಗಳಲ್ಲಿ ಓಡಾಡಲು ಆಗದಷ್ಟು ಗುಂಡಿಗಳು ಉಂಟಾಗಿವೆ. ಲೇಔಟ್‌ಗಳಲ್ಲಿರುವ ಸಣ್ಣ ರಸ್ತೆಗಳ ಬದಿಯಿರುವ ಫುಟ್‌ಪಾತ್‌ಗಳು ಬಹುತೇಕ ಒತ್ತುವರಿ ಆಗಿವೆ. ಅಂಗಡಿ, ಮಳಿಗೆದಾರರಲ್ಲದೆ ತಳ್ಳುಗಾಡಿಗಳವರು ಪಾದಚಾರಿ ಮಾರ್ಗವನ್ನು ಆಕ್ರಮಿಸಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಜನರು ಫುಟ್‌ಪಾತ್ ಬಿಟ್ಟು ರಸ್ತೆಯಲ್ಲೇ ಓಡಾಡಬೇಕಿದೆ. ಕಿರಿದಾದ ರಸ್ತೆಗಳಲ್ಲಿ ವಾಹನ ಸಂಚಾರವೂ ದುಸ್ತರವಾಗಿದೆ. ನಾಗವಾರ-ಟ್ಯಾನರಿ ರಸ್ತೆ, ಕಾವಲ್‌ಬೈರಸಂದ್ರ, ಎಂ.ಎಂ.ರಸ್ತೆ ಹೊರತುಪಡಿಸಿದರೆ ಉಳಿದೆಡೆ ಬಿಎಂಟಿಸಿ ಬಸ್ ಸೌಲಭ್ಯವೇ ಇಲ್ಲ. ಹೀಗಾಗಿ ವಾರಾಂತ್ಯದಲ್ಲಿ ಇಲ್ಲಿನ ರಸ್ತೆಗಳು ಜನರಿಂದ ಗಿಜಿಗುಡುತ್ತಿರುತ್ತವೆ.

ಕುಡಿಯುವ ನೀರನ್ನು ವಾರಕ್ಕೊಮ್ಮೆ ಬಿಡುತ್ತಾರೆ. ಕಾವೇರಿ ನೀರು ಬರುತ್ತಿದ್ದರೂ ಮನೆಮಂದಿಗೆಲ್ಲ ಸಾಲುತ್ತಿಲ್ಲ. ಚರಂಡಿಗಳಲ್ಲಿ ಹೂಳು ತುಂಬಿದ್ದರೂ ಸ್ವಚ್ಚಗೊಳಿಸಿಲ್ಲ. ಜೋರು ಮಳೆ ಬಂದಲ್ಲಿ ಕೆಲಕಾಲ ಸಮಸ್ಯೆ ಉಂಟಾಗುತ್ತದೆ. ರಸ್ತೆಗುಂಡಿಗಳನ್ನು ಬೇಗ ಸರಿಪಡಿಸಿದರೆ ಲೇಔಟ್‌ನ ಅರ್ಧ ಸಮಸ್ಯೆ ಪರಿಹರಿಸಿದಂತಾಗುತ್ತದೆ.
- ಪೀರ್ ಸಾಬ್, ಶಾಬಾದ್‌ನಗರ

ಶಾಂಪುರದಲ್ಲಿ ಮುಖ್ಯರಸ್ತೆಗಳು ಪರವಾಗಿಲ್ಲ. ಒಳರಸ್ತೆಗಳೆಲ್ಲ ಗುಂಡಿ ಬಿದ್ದಿವೆ. ರೈಲ್ವೆ ಗೇಟ್ ಬಳಿ ಉದ್ದಕ್ಕೂ ಕಸದ ರಾಶಿ ಇದ್ದರೂ ಪಾಲಿಕೆಯವರು ತೆಗೆದಿಲ್ಲ. ಮನೆ ಮನೆಯಿಂದ ಕಸದ ಸಂಗ್ರಹ ಸಮರ್ಪಕವಾಗಿ ನಡೆಯುತ್ತಿಲ್ಲ. ಕುಡಿಯುವ ನೀರು ಪೂರೈಕೆ ಇನ್ನಷ್ಟು ಸುಧಾರಿಸಬೇಕಿದೆ.
- ಮಹಮದ್ ಗೌಸ್, ಶಾಂಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net