ಮಧುಗಿರಿಗೆ ಹರಿಯಲಿದೆ ಎತ್ತಿನಹೊಳೆ

Published on

ಜನಸ್ಪಂದನ ಸಭೆಯಲ್ಲಿ ಸಹಕಾರ ಸಚಿವ ಸಚಿವ ಕೆ.ಎನ್​.ರಾಜಣ್ಣ ಭರವಸೆ

ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಕವಣದಾಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸಹಕಾರ ಸಚಿವ ಕೆ.ಎನ್​.ರಾಜಣ್ಣ ಅಹವಾಲು ಸ್ವೀಕಾರ ಮಾಡಿದರು. ಡಿಸಿ ಶುಭಕಲ್ಯಾಣ್​, ಜಿಪಂ ಸಿಇಒ ಜಿ.ಪ್ರಭು, ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್​ ಶಿರಾನ್​ ತಾಜ್​, ತಾಪಂ ಇಒ​, ಯೋಜನಾಧಿಕಾರಿ ಮಧುಸೂದನ್​, ಡಿಡಿಪಿಐ ಗಿರಿಜಾ, ಶಿಕ್ಷಣಾಧಿಕಾರಿ ರಾಜಣ್ಣ ಇತರರು ಇದ್ದರು.
ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಕವಣದಾಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸಹಕಾರ ಸಚಿವ ಕೆ.ಎನ್​.ರಾಜಣ್ಣ ಅಹವಾಲು ಸ್ವೀಕಾರ ಮಾಡಿದರು. ಡಿಸಿ ಶುಭಕಲ್ಯಾಣ್​, ಜಿಪಂ ಸಿಇಒ ಜಿ.ಪ್ರಭು, ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್​ ಶಿರಾನ್​ ತಾಜ್​, ತಾಪಂ ಇಒ​, ಯೋಜನಾಧಿಕಾರಿ ಮಧುಸೂದನ್​, ಡಿಡಿಪಿಐ ಗಿರಿಜಾ, ಶಿಕ್ಷಣಾಧಿಕಾರಿ ರಾಜಣ್ಣ ಇತರರು ಇದ್ದರು.

ಮಧುಗಿರಿ/ದೊಡ್ಡೇರಿ: ತಾಲೂಕಿನ 54 ಕೆರೆಗಳಿಗೆ ಮುಂದಿನ ದಿನಗಳಲ್ಲಿ ಎತ್ತಿನಹೊಳೆ ನೀರು ಹರಿಯಲಿದೆ ಎಂದು ಸಹಕಾರ ಸಚಿವ ಸಚಿವ ಕೆ.ಎನ್​.ರಾಜಣ್ಣ ಭರವಸೆ ನೀಡಿದರು. ತಾಲೂಕಿನ ದೊಡ್ಡೇರಿ ಹೋಬಳಿಯ ಕವಣದಾಲ ಗ್ರಾಮದ ಸುವರ್ಣಮುಖಿ ಫ್ರೌಡಶಾಲೆ ಆವರಣದಲ್ಲಿ ಬುಧವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ
ಜನಸ್ಪಂದನ ಹಾಗೂ ಖಾತಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎತ್ತಿನಹೊಳೆ ಯೋಜನೆಯ ಬಗ್ಗೆ ಆರಂಭದಲ್ಲಿ ಕೆಲವರು ಹೀಯಾಳಿಸಿದ್ದರು. ಇದಕ್ಕೆ ಆರಂಭದಲ್ಲಿ 12 ಸಾವಿರ ಕೋಟಿ ರೂ. ವೆಚ್ಚ ಮಾಡಲು ನಿಗದಿಗೊಳಿಸಲಾಗಿತ್ತು. ಆದರೆ, ಈ ಯೋಜನೆಯ ಮೊತ್ತವು ಈಗ 25 ಸಾವಿರ ಕೋಟಿ ರೂ. ತಲುಪಿದೆ. ಇದರಿಂದ ಹಾಸನ ಜಿಲ್ಲೆಯ ಹರವನಹಳ್ಳಿ ಡಿಸಿ 4 ಗೇಟ್​ನ ಮೂಲಕ ಗುರುತ್ವಾಕರ್ಷಣಾ ಬಲದಿಂದ ಮಧುಗಿರಿಗೆ ನೀರು ಹರಿಯಲಿದೆ, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ಜಿಲ್ಲೆಯಲ್ಲಿ 9 ಲಕ್ಷ ಮೀಟರ್​ ಚರಂಡಿ ಕಾಮಗಾರಿ ಅವಶ್ಯಕವಿದೆ. ಈ ಕಾಮಗಾರಿಗೆ 70ರಿಂದ 80 ಕೋಟಿ ರೂ. ವೆಚ್ಚ ತಗುಲಲಿದ್ದು, ಸರ್ಕಾರ ಈಗಾಗಲೇ 30 ಕೋಟಿ ರೂ. ಬಿಡುಗಡೆ ಮಾಡಿದೆ. ಮಧುಗಿರಿ ತಾಲೂಕಿನಲ್ಲಿ 260 ಎಕರೆ ಜಾಗ ಲಭ್ಯವಿದ್ದು, 5500 ನಿವೇಶನ ನೀಡುವ ಗುರಿ ಹೊಂದಲಾಗಿದೆ. ಸದ್ಯ 1500
ನಿವೇಶನ ಹಂಚಿಕೆಗೆ ಸಿದ್ಧವಾಗಿವೆ ಎಂದರು.
ಬಿಇಒ ಹನುಮಂತರಾಯಪ್ಪ, ಪಶು ಸಂಗೋಪನಾ ಇಲಾಖೆಯ ಸಿದ್ದನಗೌಡ, ವಲಯ ಅರಣ್ಯಾಧಿಕಾರಿ ಸುರೇಶ್​, ತೋಟಗಾರಿಕೆ ಇಲಾಖೆಯ ಸ್ವಾಮಿ, ಅಬಕಾರಿ ಇಲಾಖೆಯ ರಾಮಮೂರ್ತಿ, ಚಂದ್ರಪ್ಪ, ತಾಪಂ ಆಡಳಿತಾಧಿಕಾರಿ ಸೋನಿಯಾ ವಾರ್ಣೆಕರ್​, ಕೆಎಂಎಫ್​ ನಿರ್ದೇಶಕ ಕಾಂತರಾಜು, ಡಿಸಿಸಿ ಬ್ಯಾಂಕ್​ ನಿರ್ದೇಶಕ ಬಿ.ನಾಗೇಶ್​ ಬಾಬು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚೌಡಪ್ಪ ಇತರರಿದ್ದರು.

ಹೋಬಳಿವಾರು ಪಿಂಚಣಿ ಅದಾಲತ್​
ಜಿಲ್ಲಾಧಿಕಾರಿ ಶುಭಕಲ್ಯಾಣ್​ ಮಾತನಾಡಿ, ತಾಲೂಕಿನಲ್ಲಿ 7ನೇ ಜನಸ್ಪಂದನಾ ಮತ್ತು ಖಾತಾ ಆಂದೋಲನ ಕಾರ್ಯಕ್ರಮ ಇದಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿವಾರು ಪಿಂಚಣಿ ಆದಾಲತ್​ ಮಾಡಲಾಗುವುದು. ಬೆಸ್ಕಾಂ ಸಿಬ್ಬಂದಿ ಸಕಾಲಕ್ಕೆ ರೈತರು, ಸಾರ್ವಜನಿಕರ ದೂರವಾಣಿ ಕರೆ ಸ್ವೀಕರಿಸಿ ಸಮಸ್ಯೆ ಬಗೆಹರಿಸಬೇಕು. ಜಿಲ್ಲೆಯಲ್ಲಿ 1 ಲಕ್ಷ ಜಮೀನುಗಳ ಪೌತಿ, ವಾರಸು ಖಾತೆ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ ಎಂದರು.

ಜಿಲ್ಲಾಧಿಕಾರಿಗಳು ಸಮಸ್ಯೆ ಪರಿಹರಿಸಿ
ನಮ್ಮ ಜಿಲ್ಲೆಯಲ್ಲಿ ಕೆಲವು ಕಡೆ ಈ ಎತ್ತಿನಹೊಳೆ ಯೋಜನೆ ಕಾಮಗಾರಿ ಬಾಕಿ ಇರುವುದರಿಂದ ಈ ನೀರನ್ನು ಈಗ ಮಾರಿ ಕಣಿವೆಯ ವಾಣಿವಿಲಾಸ ಸಾಗರಕ್ಕೆ ಹರಿಸಲಾಗುತ್ತಿದೆ. ತುಮಕೂರು ಹಾಗೂ ಹಾಸನ ಜಿಲ್ಲೆಯ ಕೆಲ ಭಾಗಗಳಲ್ಲಿ ಕಾಮಗಾರಿಗೆ ಅರಣ್ಯ ಇಲಾಖೆ ಆಕ್ಷೇಪಣೆಗಳಿಂದಾಗಿ ತಡವಾಗಿತ್ತು. ಈ ಎರಡು ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಸಮಸ್ಯೆ ಬಗೆಹರಿಸಿರುವುದರಿಂದ ಶ್ರೀವೇ ಎತ್ತಿನಹೊಳೆ ನೀರು ತಾಲೂಕಿನ ಕೆರೆಗಳಿಗೆ ಹರಿಯಲಿದೆ. ಎತ್ತಿನಹೊಳೆ ಯೋಜನಾ ವ್ಯಾಪ್ತಿಗೆ ಒಳಪಡುವ ಮಧುಗಿರಿ ಮತ್ತು ಕೊರಟಗೆರೆ ತಾಲೂಕಿನಲ್ಲಿರುವ ಕೆರೆಗಳ ದುರಸ್ತಿಗಾಗಿ 602 ಕೋಟಿ ರೂ. ಬಿಡುಗಡೆ ಮಾಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.

ಜಿಲ್ಲೆಯಾಗುವುದು ಖಚಿತ
ಈಗಾಗಲೇ ರೋಪ್​ ವೇ ಕಾಮಗಾರಿ ತ್ವರಿತವಾಗಿ ನಡೆಯುತ್ತಿದ್ದು, 2025 ಮೇ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ರಾಯದುರ್ಗ ರೈಲ್ವೆ ಯೋಜನೆ ಕಾಮಗಾರಿಗೂ ವೇಗ ನೀಡಲಾಗಿದ್ದು, ತ್ವರಿತವಾಗಿ ಪೂರ್ಣಗೊಳಿಸುವುದು. ಬೆಳಗಾವಿಯ ಹುಕ್ಕೇರಿಯ ಜತೆಗೆ ಮಧುಗಿರಿ ಜಿಲ್ಲೆಯನ್ನಾಗಿ ಘೋಷಿಸುವುದು ಖಚಿತ. ಮಧುಗಿರಿ ಜನರ ನಿರೀಕ್ಷೆಗೆ ಯಾವುದೇ ಧಕ್ಕೆಯಾಗದಂತೆ ಕೆಲಸ ನಿರ್ವಹಿಸಲಾಗುವುದು ಎಂದು ರಾಜಣ್ಣ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net