ರಾಘವೇಂದ್ರ ಅವರನ್ನು ಕಟ್ಟಿ ಹಾಕಲು ರಣತಂತ್ರ

ayanuru press meet
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿದರು.
Published on

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಡಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಗೆಲುವು ನಿಶ್ಚಿತ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ವಿಶ್ವಾಸ ವ್ಯಕ್ತಪಡಿಸಿದರು.

ಗೀತಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ವೇದಿಕೆ ಸಿದ್ಧಗೊಂಡಿದೆ. ಈಗಾಗಲೇ ಕಾರ್ಯಕರ್ತರು, ಮುಖಂಡರ ಸಭೆಗಳನ್ನು ಮಾಡಿದ್ದಾರೆ. ಬೈಂದೂರು ಸೇರಿ ಶಿವಮೊಗ್ಗ ಕ್ಷೇತ್ರದಲ್ಲಿ ರಾಘವೇಂದ್ರ ಅವರನ್ನು ಕಟ್ಟಿ ಹಾಕಲು ತಂತ್ರ ಹೆಣೆಯಲಾಗುತ್ತದೆ. ಅದಕ್ಕೆ ಪೂರಕವಾಗಿ ಬೈಂದೂರಲ್ಲಿ ಮಾಜಿ ಶಾಸಕ ಸುಕುಮಾರ ಶೆಟ್ಟಿ ಅವರು ಕಾಂಗ್ರೆಸ್‌ಗೆ ಬಂದಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲೂ ಕೆಲ ಬದಲಾವಣೆಗಳು ಆಗಲಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
1998ಕ್ಕಿಂತ ಮುನ್ನ ಶಿವಮೊಗ್ಗ ಕ್ಷೇತ್ರ ಕಾಂಗ್ರೆಸ್ ಹಿಡಿತದಲ್ಲಿತ್ತು. ಎಸ್.ಬಂಗಾರಪ್ಪ ಅವರನ್ನು ಸೋಲಿಸಿ ಕ್ಷೇತ್ರವನ್ನು ಬಿಜೆಪಿಗೆ ಕೊಡಿಸಿದ್ದು ನಾನು. ಇದೀಗ ಮತ್ತೆ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಸಿಗುವಂತೆ ಶ್ರಮ ಹಾಕುತ್ತೇವೆ. ಅಖಿಲ ಭಾರತ ಮಟ್ಟದಲ್ಲಿ ಗಮನ ಸೆಳೆಯುವ ರೀತಿ ಶಿವಮೊಗ್ಗ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಹೊರಬೀಳಲಿದೆ ಎಂದರು.
ಪದವೀಧರರ ಕ್ಷೇತ್ರದ ಚುನಾವಣೆಗೆ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಸಿಗದಿದ್ದರೂ ಪಕ್ಷದ ಪರ ಕೆಲಸ ಮಾಡುತ್ತೇನೆ. ನನಗೆ ಸಿಗದಿದ್ದರೆ ಎಸ್.ಪಿ.ದಿನೇಶ್‌ಗೆ ಸಿಗಬಹುದು. ಅವರೇನು ಬೇರೆಯಲ್ಲ, ನಮ್ಮ ಪಕ್ಕದ ಊರಿನವರೇ. ಅವರಿಗೆ ಟಿಕೆಟ್ ಸಿಕ್ಕರೆ ಗೆಲ್ಲಿಸಿಕೊಂಡು ಬರುತ್ತೇವೆ. 40 ವರ್ಷಗಳಿಂದ ಬಿಜೆಪಿ ಹಿಡಿತದಲ್ಲಿರುವ ಪದವೀಧರ ಕ್ಷೇತ್ರವನ್ನು ವಶಪಡಿಕೊಳ್ಳುವುದೇ ನಮ್ಮ ಗುರಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net