

ಮೊಳಕಾಲ್ಮೂರು: ಕುಟುಂಬದಲ್ಲಿನ ಸಣ್ಣಪುಟ್ಟ ಕಲಹಕ್ಕೆ ಬೇಸತ್ತು ಎರಡು ಜೋಡಿಗಳು ಕೋರಿದ್ದು ವಿಚ್ಛೇದನ, ಕೋರ್ಟ್ ಹೇಳಿದ್ದು ಒಂದಾಗಿ ಹೋಗಿ ಎಂಬ ಕಿವಿಮಾತು.
ಹೌದು, ಚಿಕ್ಕೋಬನಹಳ್ಳಿಯ ಪ್ರಮಿಳಾ ಹಾಗೂ ಮಂಜುನಾಥ, ಚಳ್ಳಕೆರೆ ತಾಲೂಕು ಹೊನ್ನೂರು ಗ್ರಾಮದ ವಿಜಯಲಕ್ಷ್ಮೀ ಹಾಗೂ ರಂಗನಾಥ ವಿವಾಹದ ಕೆಲ ವರ್ಷದಲ್ಲಿಯೇ ಉಂಟಾದ ಸಣ್ಣಪುಟ್ಟ ಕಲಹದಿಂದ ದೂರವಾಗಿದ್ದರು. ಜತೆಗೆ ಜೀವಾನಂಶ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.
ಊರಿನ ಹಾಗೂ ಕುಟುಂಬದ ಹಿರಿಯರ ಸಲಹೆಗಳು ಕೂಡ ಇವರ ಕಿವಿ ತಲುಪಿರಲಿಲ್ಲ. ಪರಿಣಾಮ ಕೆಲ ವರ್ಷಗಳ ಕಾಲ, ಈ ಎರಡು ಕುಟುಂಬ ಕೋರ್ಟ್‌ಗೆ ಅಲೆದಾಡುತ್ತಲೇ ಇತ್ತು. ಚಿಕ್ಕ ವಯಸ್ಸಿನಲ್ಲಿಯೇ ಈ ರೀತಿ ನಿರ್ಧಾರ ಕೈಗೊಂಡ ಜೋಡಿಗಳನ್ನು ಗಮನಿಸಿದ ವಕೀಲರು, ನ್ಯಾಯಾಧೀಶರು ಜೀವನದ ಪಾಠ ಬೋಧನೆ ಮಾಡಿದ್ದರು.
ಗಂಡ-ಹೆಂಡತಿ ಜಗಳ ಉಂಡು ಮಲಗುವವರೆಗೂ ಎಂಬ ನಾಣ್ಣುಡಿ ಅರಿತುಕೊಳ್ಳಿ. ಎಲ್ಲರ ಮನೆಯಲ್ಲೂ ಕಲಹಗಳು ಇರುತ್ತವೆ. ಅವುಗಳನ್ನು ಮೆಟ್ಟಿ ಬದುಕಿನ ಬಂಡಿ ಸಾಗಿಸಬೇಕು. ಈ ರೀತಿ ಚಿಕ್ಕ ವಯಸ್ಸಿನಲ್ಲಿ ಕೆಟ್ಟ ನಿರ್ಧಾರ ಕೈಗೊಳ್ಳುವುದು ನಿಮ್ಮ ಭವಿಷ್ಯಕ್ಕೆ ನೀವೇ ಕೊಳ್ಳಿ ಇಟ್ಟುಕೊಂಡಂತೆ ಎಂದು ವಕಾಲತ್ತು ವಹಿಸಿಕೊಂಡಿದ್ದ ವಕೀಲರು ಈ ಜೋಡಿಗಳಿಗೆ ಕಿವಿಮಾತು ಹೇಳಿದ್ದರು.
ವಕೀಲರ ಪ್ರಯತ್ನ, ನ್ಯಾಯಾಧೀಶರ ಸಲಹೆಗೆ ಸ್ಪಂದಿಸಿದ ಎರಡು ಜೋಡಿಗಳು ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಆದಾಲತ್‌ನಲ್ಲಿ ಸಿವಿಲ್ ನ್ಯಾಯಾಧೀಶೆ ಟಿ.ಕೆ.ಪ್ರಿಯಾಂಕಾ ಸಮ್ಮುಖದಲ್ಲಿ ಪರಸ್ಪರ ಹೂವಿನ ಹಾರ ಬದಲಾಯಿಸಿಕೊಂಡು ಒಗ್ಗೂಡಿದರು.
ಎರಡು ಜೋಡಿಗಳು ಒಗ್ಗೂಡಿದ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲಿ ಸಡಗರದ ವಾತಾವರಣ ನಿರ್ಮಾಣವಾಗಿತ್ತು.
ವಕೀಲರ ಸಂಘದ ತಾಲೂಕಾಧ್ಯಕ್ಷ ಆರ್.ಆನಂದ್, ಉಪಾಧ್ಯಕ್ಷ ಜಿ.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಕುಮಾರಪ್ಪ, ವಕೀಲರಾದ ಜಿ.ಚಾಣಕ್ಯ, ವಿ.ಡಿ.ರಾಘವೇಂದ್ರ, ಕೆ.ವಿನೋದಾ, ಎಂ.ಎನ್.ವಿಜಯಲಕ್ಷ್ಮೀ, ಅನುಸೂಯಾ, ಕೆ.ಎಂ.ರಾಮಾಂಜಿನಿ, ಬಸವರಾಜ್ ಇತರರಿದ್ದರು.
ವೈಷಮ್ಯ ಮರೆತರೆ ನೆಮ್ಮದಿ ಲಭ್ಯ: ನೊಂದ ಜನರಿಗೆ ಕಾನೂನಾತ್ಮಕವಾಗಿ ನ್ಯಾಯದಾ ಕೊಡಿಸುವುದೇ ನ್ಯಾಯಾಲಯದ ಉದ್ದೇಶ. ಕೆಲ ಕಾರಣಗಳಿಂದ ಇತ್ಯರ್ಥವಾಗದ ಪ್ರಕರಗಳನ್ನು ಸಮನ್ವಯ ಮಾರ್ಗದಲ್ಲಿ ಬಗೆಹರಿಸುವಲ್ಲಿ ಲೋಕ ಆದಾಲತ್ ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದು ಸಿವಿಲ್ ನ್ಯಾಯಾಧೀಶೆ ಟಿ.ಕೆ.ಪ್ರಿಯಾಂಕಾ ಹೇಳಿದರು. ದ್ವೇಷ, ಅಸೂಯೆ ಮರೆತರೆ ನೆಮ್ಮದಿ ಲಭಿಸಲಿದೆ ಎಂಬ ವಾಸ್ತವ ಸತ್ಯ ಅರಿತುಕೊಳ್ಳಬೇಕು. ಸಣ್ಣಪುಟ್ಟ ವಿಷಯಗಳಿಗೆ ಕೋರ್ಟ್‌ಗೆ ಅಲೆದಾಡುವುದು ಕುಟುಂಬದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದ ಅವರು, ಹಲವು ವರ್ಷಗಳ ಕಾಲ ದೂರವಾಗಿದ್ದ ದಂಪತಿಗಳಿಗೆ ತಿಳಿವಳಿಕೆ ಪಾಠ ಮಾಡಿದ್ದರಿಂದ ಅವರು ಒಗ್ಗೂಡಿದ್ದಾರೆ. ನ್ಯಾಯಾಲಯ ಇಂತಹ ಒಳ್ಳೆಯದ್ದನ್ನೇ ಬಯಸುತ್ತದೆ ಎಂದರು.