

ಅವಿನಾಶ್ ಜೈನಹಳ್ಳಿ ಮೈಸೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ಕ್ಷೇತ್ರದ ಕೇಂದ್ರಸ್ಥಾನಲ್ಲಿರುವ ‘ವರುಣ ಪ್ರಾಥಮಿಕ ಆರೋಗ್ಯ ಕೇಂದ್ರ’ವನ್ನು ಮೈಸೂರು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವಂತೆ ಕೋರಿ ಸಲ್ಲಿಸಿರುವ ಪ್ರಸ್ತಾವನೆಗೆ ಬೆಲೆ ಇಲ್ಲದಂತಾಗಿದೆ.
ಈ ಸಂಬಂಧ ಜಿಲ್ಲಾ ಆರೋಗ್ಯ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಿ ವರ್ಷವೇ ಕಳೆದರೂ, ಅನುಮತಿ ನೀಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಈ ಪ್ರಸ್ತಾವನೆಗೆ ಅನುಮತಿ ದೊರೆಯುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ.
ಸುತ್ತಮುತ್ತಲಿನ ಜಿಲ್ಲೆಗಳಿಗೆಲ್ಲ ದೊಡ್ಡಾಸ್ಪತ್ರೆಯಾಗಿರುವ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆ ಮೈಸೂರಿನಲ್ಲೇ ಇದ್ದರೂ, ಜಿಲ್ಲೆಯಲ್ಲಿ ಅಧಿಕೃತ ಜಿಲ್ಲಾಸ್ಪತ್ರೆ ಹಾಗೂ ಮೈಸೂರು ತಾಲೂಕಿಗೆ ಅಧಿಕೃತ ತಾಲೂಕು ಆಸ್ಪತ್ರೆ ಇರಲಿಲ್ಲ.
ಹೀಗಾಗಿ, ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ಜಿಲ್ಲಾಸ್ಪತ್ರೆ ಮಂಜೂರು ಮಾಡಿದ್ದರು. ಸದ್ಯ ಕೆಆರ್‌ಎಸ್ ರಸ್ತೆಯಲ್ಲಿರುವ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಸ್ಪತ್ರೆ ಸಾರ್ವಜನಿಕರಿಗೆ ಸೇವೆ ನೀಡುತ್ತಿದೆ.
ನಗರದಲ್ಲಿ ಜಿಲ್ಲಾಸ್ಪತ್ರೆ ಸ್ಥಾಪನೆಯ ಬೆನ್ನಲ್ಲೇ ಮೈಸೂರು ತಾಲೂಕು ಆಸ್ಪತ್ರೆಯೂ ಸ್ಥಾಪನೆಯಾಗಬೇಕು ಎಂಬ ಕೂಗು ಜೋರಾಗಿತ್ತು. ಹೀಗಾಗಿ, ಐದಾರು ವರ್ಷಗಳ ಹಿಂದೆ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಅಂದಿನ ಸಂಸದ ಆರ್.ಧ್ರುವನಾರಾಯಣ ಈ ಸಂಬಂಧ ಸೂಚನೆ ನೀಡಿದ್ದರು. ಮೈಸೂರು ತಾಲೂಕಿನಲ್ಲಿ ತಾಲೂಕು ಆಸ್ಪತ್ರೆಯೇ ಇಲ್ಲ. ಮೈಸೂರು ನಗರದಲ್ಲೇ ಜಿಲ್ಲಾಸ್ಪತ್ರೆ ನಿರ್ಮಾಣವಾಗುತ್ತಿರುವುದರಿಂದ ತಾಲೂಕು ಆಸ್ಪತ್ರೆಯನ್ನು ವರುಣ ಗ್ರಾಮದಲ್ಲಿ ನಿರ್ಮಿಸಲು ಯೋಜನೆ ರೂಪಿಸುವಂತೆ ಆರೋಗ್ಯಾಧಿಕಾರಿಗೆ ನಿರ್ದೇಶಿಸಿದ್ದರು. ಈ ಸಂಬಂಧ 2020ರ ನವೆಂಬರ್‌ನಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ಅಂದಿನ ಡಿಎಚ್‌ಒ ಡಾ.ಬಿ.ಬಸವರಾಜು, ಮೈಸೂರಿನಲ್ಲಿ ತಾಲೂಕು ಆಸ್ಪತ್ರೆ ಇಲ್ಲದ ಕಾರಣ ವರುಣ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ತಾಲೂಕು ಆಸ್ಪತ್ರೆಯಾಗಿ ಪರಿವರ್ತಿಸುವಂತೆ ಕೋರಿದ್ದರು. ಆದರೆ ಸರ್ಕಾರ ಅನುಮತಿ ನೀಡಿಲ್ಲ. ಇದು ಮುಖ್ಯಮಂತ್ರಿ
ಪ್ರತಿನಿಧಿಸುವ ಕ್ಷೇತ್ರದ ವಿಷಯವಾಗಿದ್ದರೂ ಸರ್ಕಾರದ ಮುಂದೆ ಪ್ರಸ್ತಾವನೆ ಹಾಗೆಯೇ ಉಳಿದಿದೆ.
ವರುಣ ಗ್ರಾಮದ ಆಸ್ಪತ್ರೆ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದು, ತಾಲೂಕು ಆಸ್ಪತ್ರೆಯಾಗಿ ಬದಲಾದರೆ ಸುಧಾರಿತ ವೈದ್ಯಕೀಯ ಸೇವೆ ನೀಡಲಿದೆ. ಸದ್ಯ ಒಬ್ಬರು ವೈದ್ಯರು, 6 ಬೆಡ್(3 ಪುರುಷ -3 ಮಹಿಳೆ)ಗಳ ಸೌಲಭ್ಯ ಹೊಂದಿದೆ. ನಿತ್ಯ 40ರಿಂದ 60 ರೋಗಿಗಳು ಇಲ್ಲಿಗೆ ತಪಾಸಣೆಗೆ ಬರುತ್ತಾರೆ. ತಾಲೂಕು ಆಸ್ಪತ್ರೆಯಾದರೆ ಈಗಿರುವ 6 ಬೆಡ್‌ಗಳ ಆಸ್ಪತ್ರೆ 100 ಹಾಸಿಗೆಯ ಆಸ್ಪತ್ರೆಯಾಗಿ ಪರಿವರ್ತನೆಯಾಗಲು ಅವಕಾಶವಿದೆ. 95 ಪೂರ್ಣಕಾಲಿಕ ಸಿಬ್ಬಂದಿ ನೇಮಕವಾಗಲಿದ್ದಾರೆ. ಸ್ಕಾೃನಿಂಗ್, ಕಣ್ಣು, ಮೂಗು, ರಕ್ತಪರೀಕ್ಷೆ, ಹೆರಿಗೆ ಸೇರಿದಂತೆ ವಿವಿಧ ಸೇವೆಗಳು ಲಭ್ಯವಾಗಲಿವೆ. ಹತ್ತು ವೈದ್ಯರು, ಒಬ್ಬ ದಂತವೈದ್ಯ, ಸಿಬ್ಬಂದಿ ನೇಮಕವಾಗಲಿದ್ದಾರೆ. ಜತೆಗೆ, ಹೊಸ ಕಟ್ಟಡ ನಿರ್ಮಾಣವಾಗಲಿದೆ.
ವರುಣ ಕ್ಷೇತ್ರದ ಬಹುತೇಕ ಗ್ರಾಮಗಳ ಜನರು ಚಿಕಿತ್ಸೆಗಾಗಿ ವರುಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಇಲ್ಲಿ ತಾಲೂಕು ಆಸ್ಪತ್ರೆಯಾಗುವ ಮೊದಲು ತುರ್ತು ಚಿಕಿತ್ಸೆ, ಒಳರೋಗಿ ಸೌಲಭ್ಯಗಳು ಬೇಕು ಎಂಬ ಬೇಡಿಕೆ ಇದೆ. ಇವುಗಳೊಂದಿಗೆ ಎಕ್ಸ್‌ರೇ ಸೌಲಭ್ಯ, ಮಹಿಳಾ ಮತ್ತು ಮಕ್ಕಳ ವಿಭಾಗ, ಸ್ತ್ರೀರೋಗ ತಜ್ಞರ ಸಹಿತವಾದ ವಿವಿಧ ಸೌಲಭ್ಯಗಳು ಬೇಕಿವೆ. ಈ ಬಗ್ಗೆಯೂ ಗಮನ ಹರಿಸಬೇಕಿದೆ.
ಪ್ರಸ್ತುತ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಮೈಸೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಈ ಆಸ್ಪತ್ರೆಗಳಿಗೆ ನಿತ್ಯ ಸಾವಿರಾರು ರೋಗಿಗಳು ಬರುತ್ತಾರೆ. ಇದರಿಂದ ಎಲ್ಲ ರೋಗಿಗಳಿಗೂ ಆರೋಗ್ಯ ಸೇವೆ ಸಮರ್ಪಕವಾಗಿ ಸಿಗದಂತಾಗಿದ್ದು, ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ.
ಚೆಲುವಾಂಬ ಆಸ್ಪತ್ರೆಯಲ್ಲಿ ನಿತ್ಯ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಹೆರಿಗೆಗಳಾಗುತ್ತಿವೆ. ಹೀಗಾಗಿ, ದಾಖಲಾಗುತ್ತಿರುವ ಗರ್ಭಿಣಿಯರು ಮತ್ತು ಮಕ್ಕಳು ಎಷ್ಟೋ ಬಾರಿ ಹಾಸಿಗೆಯಿಲ್ಲದೆ ನೆಲದ ಮೇಲೆ ಮಲಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ತಾಲೂಕು ಆಸ್ಪತ್ರೆ ನಿರ್ಮಾಣವಾದರೆ, ಕೆ.ಆರ್.ಆಸ್ಪತ್ರೆ ಮತ್ತು ಚೆಲುವಾಂಬ ಆಸ್ಪತ್ರೆ ಮೇಲಿನ ಒತ್ತಡ ಕೊಂಚ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಬಡರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಹಣ ಕಳೆದುಕೊಳ್ಳುವುದು ತಪ್ಪಲಿದೆ. ಆದ್ದರಿಂದ ಸರ್ಕಾರ ಆದಷ್ಟು ಬೇಗ ತಾಲೂಕು ಆಸ್ಪತ್ರೆಗೆ ಅನುಮತಿ ನೀಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಮೈಸೂರು ತಾಲೂಕಿನಲ್ಲಿ ತಾಲೂಕು ಆಸ್ಪತ್ರೆ ಇಲ್ಲದಿರುವ ಕಾರಣ ವರುಣ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯನ್ನಾಗಿ ಪರಿರ್ವತಿಸುವಂತೆ ಕೋರಿ ಸರ್ಕಾರಕ್ಕೆ ಹಿಂದಿನ ಜಿಲ್ಲಾ ಆರೋಗ್ಯಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಪ್ರಸ್ತಾವನೆ ಸರ್ಕಾರದ ಹಂತದಲ್ಲಿದೆ.ಡಾ.ಪಿ.ಸಿ.ಕುಮಾರಸ್ವಾಮಿ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ, ಮೈಸೂರು