ಮೈಸೂರಿನಲ್ಲಿ ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆಗೆ ಚಾಲನೆ

dasara yoga
Published on

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಯೋಗ ದಸರಾ ಉಪಸಮಿತಿ ವತಿಯಿಂದ ಕರ್ನಾಟಕ ವಸ್ತು ಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಆಯೋಜಿಸಿದ್ದ "ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆ"ಯನ್ನು ದೀಪ ಬೆಳಗಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಿದರು.

12 ವರ್ಷ ಮೇಲ್ಪಟ್ಟವರಿಂದ 65 ವರ್ಷದವರವರೆಗೆ ಬಾಲಕರು, ಬಾಲಕಿಯರು, ಪುರುಷರು, ಮಹಿಳೆಯರು ಸೇರಿದಂತೆ ನಾಲ್ಕು ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಶೇಷಚೇತನರು ಸೇರಿದಂತೆ 1000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ವೇದಿಕೆ ಕಾರ್ಯಮದ ವೇಳೆ ನಾಲ್ಕು ಯೋಗಾಪಟುಗಳು ಯೋಗ ಪ್ರದರ್ಶನ ಮಾಡಿದರು.

ಪ್ರತಾಪ್ ಸಿಂಹ ಮಾತನಾಡಿ, ನಾಡಹಬ್ಬ ದಸರಾ ಹಬ್ಬದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಬಹಳ ಆಸಕ್ತಿ ಹೊಂದಿದ್ದು, ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಒತ್ತು ನೀಡುತ್ತಿದ್ದಾರೆ. ಎರಡು ವರ್ಷಗಳಿಂದ ಕೋವಿಡ್, ನೆರೆಯ ಕಾರಣದಿಂದ ಅದ್ದೂರಿ ದಸರಾ ಆಚರಣೆ ಮಾಡಲಾಗಿರಲಿಲ್ಲ. ಈ ಬಾರಿ ಮುಖ್ಯಮಂತ್ರಿಗಳ ಒಪ್ಪಿಗೆ ಪಡೆದು ಜಿಲ್ಲಾ ಉಸ್ತುವಾರಿ ಸಚಿವರು ವಿಶೇಷವಾಗಿ ಆಯೋಜನೆ ಮಾಡಿದ್ದಾರೆ.

ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಬೇಕು ಎಂಬ ಆಸೆಯು ಅಂತಾರಾಷ್ಟ್ರೀಯ ಯೋಗಾದಿನದಂದು ನೆರವೇರಿತು. ಮುಂದಿನ ದಿನಗಳಲ್ಲಿ ಯೋಗಕ್ಕೆ ಮೈಸೂರಿನಲ್ಲಿ ಮತ್ತಷ್ಟು ಒತ್ತು ನೀಡುವ ಮೂಲಕ ಯೋಗವನ್ನು ಗಟ್ಟಿಗೊಳಿಸುವ ಕಾರ್ಯವಾಗಬೇಕಿದೆ‌. ಆರೋಗ್ಯಯುತ ಜೀವನಕ್ಕೆ ಯೋಗವು ಸಹಕಾರಿಯಾಗಿದ್ದು, ಪೋಷಕರು ಮಕ್ಕಳಿಗೆ ಯೋಗ ಕಲಿಸಲು ಹೆಚ್ಚಿನ ಆಸಕ್ತಿ ತೋರಿಸುವಂತೆ ತಿಳಿಸಿದರು.

ದಸರಾ ಯೋಗಾ ಉಪಸಮಿತಿ ಅಧ್ಯಕ್ಷ ಬಾಲಕೃಷ್ಣ, ಜಂಗಲ್ ರೆಸಾರ್ಟ್ ಮಾಜಿ ಅಧ್ಯಕ್ಷ ಅಪ್ಪಣ್ಣ, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಮಿರ್ಲೆ ಶ್ರೀನಿವಾಸ, ಯೋಗ ದಸರಾ ಉಪವಿಶೇಷಾಧಿಕಾರಿ ಸೀಮಂತಿನಿ, ಯೋಗಾ ಫೌಂಡೇಶನ್ ಕಾರ್ಯದರ್ಶಿ ಶಶಿಕುಮಾರ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net