

ಬೀಳಗಿ: ರಾಜಕಾರಣದಲ್ಲೇ ಐತಿಹಾಸಿಕ ಮೈಲುಗಲ್ಲು ಸಾಧಿಸಿದ ದಿ. ಡಿ. ದೇವರಾಜ ಅರಸು ಕೊಡುಗೆ ಅಪಾರವಾಗಿದೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.
ಸ್ಥಳೀಯ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಮಂಗಳವಾರ ಡಿ. ದೇವರಾಜ ಅರಸು ಅವರ 109ನೇ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅರಸು ಅವರು ಶೋಷಿತ ಸಮುದಾಯದ ಧ್ವನಿಯಾಗಿ ಕೆಲಸ ಮಾಡಿ ತಮ್ಮದೇ ಆದ ಕೊಡುಗೆ ನೀಡಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದರು. ಅವರ ವ್ಯಕ್ತಿತ್ವ, ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕಿದೆ ಎಂದರು.
ಪತ್ರಕರ್ತ ರಮೇಶ ಬಗಲಿ ಉಪನ್ಯಾಸ ನೀಡಿ, ಭೂಮಿ ಉಳುವವನೇ ಒಡೆಯ ಘೋಷಣೆ ಮಾಡಿದರಲ್ಲದೆ, ಭೂ ಸುದಾರಣೆ ಕಾಯ್ದೆ ತಂದು ರೈತರಿಗೆ ಮತ್ತು ಪೌರಕಾರ್ಮಿಕರಿಗೆ, ಕೃಷಿ, ನೀರಾವರಿ, ವಿದ್ಯುತ್ ಸೇರಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಧೀಮಂತ ನಾಯಕ ಎಂದು ಹೇಳಿದರು.
ಗ್ರೇಡ್-2 ತಹಸೀಲ್ದಾರ್ ಆನಂದ ಕೋಲ್ಲಾರ, ತಾಪಂ ಇಒ ಅಭಯಕುಮಾರ ಮೊರಬ, ಪಪಂ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೀನಾಕ್ಷಿ ಕೋಟಿ, ನಿಲಯ ಪಾಲಕ ಗುರುನಾಥ ತಳವಾರ, ಎಲ್ಲ ನಿಲಯ ಪಾಲಕರು ಮತ್ತು ಎಲ್ಲ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಎಸ್‌ಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.