ರೋಣದಲ್ಲಿ ಗೂಡಂಗಡಿ ಎತ್ತಂಗಡಿ

24 RON 2
Published on

ರೋಣ: ಪಟ್ಟಣದ ಮುಖ್ಯರಸ್ತೆ ಪಕ್ಕದ ಚರಂಡಿಗಳ ಮೇಲೆ ಸ್ಥಾಪಿಸಿದ್ದ ಗೂಡಂಗಡಿಗಳನ್ನು ಪುರಸಭೆಯ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ಇತ್ತೀಚೆಗೆ ತೆರವು ಮಾಡಿಸಿದ್ದಾರೆ. ಪಟ್ಟಣದ ಪ್ರಮುಖ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿವೆ. ಮಳೆ ಬಂದರೆ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಪುರಸಭೆಯ ಸದಸ್ಯರು ಇತ್ತೀಚೆಗೆ ಆಯೋಜಿಸಿದ್ದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಸಿಬ್ಬಂದಿ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಳಿದ ಪುರಸಭೆ ಸಿಬ್ಬಂದಿ ಜೆಸಿಬಿ ಮೂಲಕ ಚರಂಡಿ ಸ್ವಚ್ಛ ಮಾಡಿದರು. ಚರಂಡಿ ಜಾಗ ಅತಿಕ್ರಮಿಸಿ ಸ್ಥಾಪಿಸಿದ್ದ ಗೂಡಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳ ಚಾವಣಿಗಳನ್ನು ಕಿತ್ತೆಸೆದಿದ್ದು ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಚರಂಡಿಯ ಸ್ವಚ್ಛತೆ ಕೈಗೊಂಡರು.

ಪಟ್ಟಣದ ಸೂಡಿ ವೃತ್ತದಿಂದ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಪಟ್ಟಣದ ಎಲ್ಲ ಚರಂಡಿಗಳ ಸ್ವಚ್ಛತೆಗಾಗಿ ಮತ್ತು ಚರಂಡಿಗಳನ್ನು ಅತಿಕ್ರಮಿಸಿರುವ ಎಲ್ಲ ಗೂಡಂಗಡಿಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ. ವ್ಯವಸ್ಥಿತ ಸಿಸಿ ರಸ್ತೆ ನಿರ್ಮಾಣಕ್ಕಾಗಿ ಭೂಮಿಪೂಜೆ ನೆರವೇರಿಸಲಾಗಿದೆ. ಸದರಿ ಕಾಮಗಾರಿಗೂ ಗೂಡಂಗಡಿ ತೆರವು ಅನಿವಾರ್ಯವಾಗಿದ್ದು, ಪಟ್ಟಣದ ಜನತೆ ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net