

ಮೈಸೂರು: ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಈ ಬಾರಿ ಮಕ್ಕಳಿಗೂ ರಂಗವೇದಿಕೆ ಸಿದ್ಧಗೊಂಡಿದ್ದು, ಅವರ ಸುತ್ತ ಕೇಂದ್ರೀಕೃತಗೊಳ್ಳಲಿದೆ.
ಪ್ರತಿ ವರ್ಷ ಒಂದಲ್ಲಾ ಒಂದು ಘೋಷವಾಕ್ಯದಲ್ಲಿ ನಾಟಕೋತ್ಸವ ಸಂಘಟಿಸಿಕೊಂಡು ಬರಲಾಗುತ್ತಿದೆ. ಹಬ್ಬದಂತೆ ನಡೆಯುವ ನಾಟಕೋತ್ಸವದಲ್ಲಿ ಈ ವರ್ಷ ಮೊದಲ ಬಾರಿಗೆ ಮಕ್ಕಳ ನಾಟಕಗಳಿಗೂ ವೇದಿಕೆ ಕಲ್ಪಿಸಲಾಗಿದೆ.
ಈ ಮೂಲಕ ಮಕ್ಕಳಿಗೆ ರಂಗ ಪರಿಚಯ ಮಾಡಿಕೊಟ್ಟರೆ ಮುಂದೆ ರಂಗಭೂಮಿಯತ್ತ ಆಸಕ್ತಿ, ಸೆಳೆತ ಉಂಟಾಗಿ ಕಲೆಯನ್ನು ಮುನ್ನಡೆಸಲಿದ್ದಾರೆ ಎನ್ನುವು ಉದ್ದೇಶ ಇದರ ಹಿಂದಿದೆ.
ಜ.14ರಿಂದ 19ರವರೆಗೆ ಆರು ದಿನಗಳ ಕಾಲ ನಗರದ ರಂಗಾಯಣದ ಆವರಣದಲ್ಲಿ ನಡೆಯುವ ‘ಬಹುರೂಪಿ’ಯಲ್ಲಿ ಮಕ್ಕಳ ತಂಡದಿಂದ 5 ನಾಟಕ ಹಾಗೂ ಒಂದು ಯಕ್ಷಗಾನ ಪ್ರದರ್ಶನವಿರುತ್ತದೆ.
ಇದರಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ಮಲೆಯಾಳಂ ಭಾಷೆಯ ನಾಟಕಗಳನ್ನು ಮಕ್ಕಳು ಪ್ರಸ್ತುತಪಡಿಸಲಿದ್ದು, ಮಕ್ಕಳ ನಾಟಕಕ್ಕಾಗಿಯೇ ವಿಶಾಲವಾದ ಕಲಾಮಂದಿರವನ್ನು ನಿಗದಿಗೊಳಿಸಲಾಗಿದೆ.
ಕಲಾಮಂದಿರದಲ್ಲಿ ಸುಮಾರು ಎರಡೂ ಸಾವಿರಕ್ಕೂ ಹೆಚ್ಚು ಜನರು ಕೂರಬಹುದಾದ ದೊಡ್ಡ ಸಭಾಂಗಣವಾಗಿದೆ. ಇಲ್ಲಿ ಮಕ್ಕಳು ನಾಟಕ ಪ್ರದರ್ಶನ ಮಾಡಿದರೆ ಹೆಚ್ಚು ಜನ ವೀಕ್ಷಿಸಲು ಅವಕಾಶ ದೊರೆಯಲಿದೆ. ಅಲ್ಲದೇ ಮಕ್ಕಳ ನಾಟಕಕ್ಕೆ ಮಹತ್ವ ನೀಡಿದಂತಾಗುತ್ತದೆ.
ಬಹುರೂಪಿಯ ಇತರ ನಾಟಕಗಳು ರಂಗಾಯಣದ ವನರಂಗ, ಭೂಮಿಗೀತಾ ಹಾಗೂ ಕಲಾಮಂದಿರದ ಆವರಣದಲ್ಲಿ ಇರುವ ಕಿರುರಂಗಮಂದಿರದಲ್ಲಿ ಪ್ರದರ್ಶನ ಕಾಣುತ್ತವೆ.
ನಾಟಕ ಮಾತ್ರವಲ್ಲದೇ ಮಕ್ಕಳಿಗಾಗಿ ಬೇರೆ ಬೇರೆ ರೀತಿಯ ಕಾರ್ಯ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ. ಶಾಲಾ ಮಕ್ಕಳಿಗೆ ಚಿತ್ರಕಲೆ ರಚನೆ ಮಾಡುವುದು, ಕರಕುಶಲ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.
ಇದಲ್ಲದೇ ಬಹುರೂಪಿ ಪ್ರಾರಂಭವಾಗುವ ಮೊದಲು ಮಕ್ಕಳು ರಂಗಕಲಾವಿದರ ಜತೆಗೂಡಿ ನಾಟಕೋತ್ಸವಕ್ಕೆ ಯಾವ ರೀತಿ ತಯಾರಿ ನಡೆಯುತ್ತದೆ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ.
ಮಕ್ಕಳ ಚಲನಚಿತ್ರೋತ್ಸವ:
ಬಹುರೂಪಿಯಲ್ಲಿ ಚಲನಚಿತ್ರೋತ್ಸವ ಒಂದು ಭಾಗವಾಗಿದೆ. ಇಲ್ಲಿಯೂ ಮಕ್ಕಳಿಗೆ ಮೀಸಲಿಡಲಾಗಿದೆ. ಕೊನೆಯ ಎರಡು ದಿನ (ಜ.18 ಮತ್ತು 19) ಚಲನಚಿತ್ರೋತ್ಸವದಲ್ಲಿ ಮಕ್ಕಳ ಚಲನಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಮಕ್ಕಳಿಗೆ ಸಂಬಂಧಿಸಿದ ಪುಸಕ್ತ ಮೇಳವೂ ಇರಲಿದೆ.
ಮಕ್ಕಳ ನಾಟಕೋತ್ಸವದ ಹಿನ್ನೆಲೆಯಲ್ಲಿ ರಂಗಾಯಣದಿಂದ ಶಾಲೆಗಳಿಗೆ ಭೇಟಿಯಾಗಿ ಭಿತ್ತಿಪತ್ರಗಳನ್ನು ಅಂಟಿಸಿ ಪ್ರಚಾರ ಮಾಡಲಾಗಿದೆ. ಯಾವ ದಿನ ಯಾವ ಯಾವ ನಾಟಕಗಳು ಪ್ರದರ್ಶನವಾಗುತ್ತವೆ, ಅವುಗಳ ಘೋಷವಾಕ್ಯ (ಥೀಮ್) ಯಾವುದು, ಆ ನಾಟಕ ನೀಡುವ ಸಂದೇಶವೇನು ಎನ್ನುವ ವಿಚಾರಗಳನ್ನು ಮಕ್ಕಳಿಗೆ ಮುಟ್ಟಿಸಲಾಗುತ್ತಿದೆ.
ಅಲ್ಲದೇ ಸಣ್ಣ ಪ್ರಮಾಣದ ಟ್ಯಾಬ್ಲೋವನ್ನು ಮಾಡಿ, ಅದರ ಮೂಲಕ ಪ್ರಚಾರ ಕಾರ್ಯ ಮಾಡುವ ಆಲೋಚನೆಯೂ ರಂಗಾಯಣಕ್ಕೆ ಇದೆ. ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಡಿಡಿಪಿಐ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಜತೆ ಮಕ್ಕಳ ನಾಟಕೋತ್ಸವ ಕುರಿತು ಹಲವಾರು ಸಲ ಮಾತುಕತೆ ನಡೆಸಲಾಗಿದೆ.
ಒರಿಯೆಂಟೇಷನ್:
ಮಕ್ಕಳ ನಾಟಕೋತ್ಸವದ ಹಿನ್ನೆಲೆಯಲ್ಲಿ ಸುಮಾರು 500 ಜನ ಶಿಕ್ಷಕರಿಗೆ ರಂಗಾಯಣದ ಆವರಣದಲ್ಲಿ ಎರಡು ದಿನಗಳ ಕಾಲ ಒರಿಯೆಂಟೇಷನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಕ್ಕಳು ಮತ್ತು ರಂಗಭೂಮಿಯ ನಡುವೆ ಶಿಕ್ಷಕರು ಹೇಗೆ ಸೇತುವೆಯಂತೆ ಕೆಲಸ ಮಾಡಬೇಕು. ಶಿಕ್ಷಣದೊಂದಿಗೆ ರಂಗ ಚಟುವಟಿಕೆ ಜತೆಯಾಗಿದ್ದರೆ ಮಕ್ಕಳಿಗೆ ಯಾವ ರೀತಿ ಉಪಯೋಗ ಮತ್ತು ಅವರ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎನ್ನುವ ವಿಚಾರಗಳನ್ನು ಮಂಥನ ಮಾಡಲಾಯಿತು.
-----------
ಮಕ್ಕಳಿಗೆ ಮಹತ್ವ ನೀಡಲಾಗಿದೆ:
ಸಮಾಜದ ಒಂದು ಭಾಗವೇ ಆಗಿರುವ ಮಕ್ಕಳಿಗೆ ಈ ಬಾರಿಯ ಬಹುರೂಪಿಯಲ್ಲಿ ಮಹತ್ವ ನೀಡಲಾಗುವುದು. ಇತ್ತೀಚಿನ ದಿನಗಳಲ್ಲಿ ಮಕ್ಕಳ ಚಟುವಟಿಕೆ ಮರೆಯಾಗುತ್ತಿದೆ. ಹಾಗಾಗಿ ಮಕ್ಕಳ ಮಹತ್ವವನ್ನು ತಿಳಿಸಲು ಬಹುರೂಪಿಯಲ್ಲಿ ಮಕ್ಕಳ ನಾಟಕೋತ್ಸವ ಆಯೋಜನೆ ಮಾಡಲಾಗಿದೆ. ನಾಟಕೋತ್ಸವದಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಆಸಕ್ತಿ ಬೆಳೆದು ರಂಗಭೂಮಿಯನ್ನು ಮುಂದಿನ ತಲೆಮಾರಿಗೆ ತಗೆದುಕೊಂಡು ಹೋಗಲು ಸಹಕಾರಿಯಾಗಲಿದೆ.
ಸತೀಶ್ ತಿಪಟೂರು
ನಿರ್ದೇಶಕ, ರಂಗಾಯಣ