

ಶಿಗ್ಗಾಂವಿ: ತಾಲೂಕಿನ ಕ್ರೀಡಾಪಟುಗಳ ಇಚ್ಛೆಯಂತೆ ಪಟ್ಟಣದ ಹೊರವಲಯದಲ್ಲಿ ನಿರ್ವಣವಾದ ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣ ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾಗಿದೆ.
ಹತ್ತು ವರ್ಷಗಳ ಹಿಂದೆ ಬಸವರಾಜ ಬೊಮ್ಮಾಯಿ ಅವರು ಮಂತ್ರಿಯಾಗಿದ್ದ ಅವಧಿಯಲ್ಲಿ ಕೋಟಿ ರೂಪಾಯಿ ಅನುದಾನದಲ್ಲಿ ತಾಲೂಕು ಮಟ್ಟದ ಸುಸಜ್ಜಿತ ಹೊರಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣ ನಿರ್ವಣವಾಯಿತು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿರ್ವಹಣೆ ಇಲ್ಲದೆ, ಕ್ರೀಡೆಗಳಗೂ ಕ್ರೀಡಾಂಗಣಕ್ಕೂ ಸಂಬಂಧವೇ ಇಲ್ಲದಂತಾಗಿದೆ. ಸುಣ್ಣ ಬಣ್ಣವಿಲ್ಲದೆ ಒಳಾಂಗಣವು ಕಿಡಿಗೇಡಿಗಳಿಂದಾಗಿ ಹಾಳಾಗುತ್ತಿದೆ. ಒಳಾಂಗಣದಲ್ಲಿ ಬಾಸ್ಕೆಟ್ಬಾಲ್, ಟೇಬಲ್ ಟೆನಿಸ್, ವಾಲಿಬಾಲ್, ಶಟಲ್ಕಾಕ್ ಬಾಲ್, ಬ್ಯಾಡ್ಮಿಂಟನ್ ಸೇರಿ ಅನೇಕ ಕ್ರೀಡಾ ಚಟುವಟಿಕೆಗಳ ವ್ಯವಸ್ಥೆ ನಿರ್ವಹಣೆ ನಿರ್ಲಕ್ಷ್ಯಕ್ಕೊಳಗಾಗಿ ನಿರುಪಯುಕ್ತವಾಗಿದೆ. ಅಲ್ಲಲ್ಲಿ ಗೋಡೆಗಳು ಬಿರುಕು ಬಿಟ್ಟಿದ್ದರಿಂದ ಸೋರುತ್ತಿದೆ.
ಕ್ರೀಡಾಂಗಣ ಒಳಗಡೆಯೇ ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಲ್ಲುತ್ತದೆ. ದನಕರುಗಳನ್ನು ಮೇಯಿಸಲು ಬಿಡುವುದರಿಂದ ಕೊಳಚೆಯಾಗಿ ಆವರಣ ಅಸ್ವಚ್ಛತೆ ಆಗರವಾಗಿದೆ. ಕ್ರೀಡಾಂಗಣದ ಒಳಗಡೆ ಕುಡಿಯಲು ನೀರಿನ ವ್ಯವಸ್ಥೆ ಇಲ್ಲ, ಸಮರ್ಪಕ ಶೌಚಗೃಹ ವ್ಯವಸ್ಥೆ ಇಲ್ಲದಿರುವುದರಿಂದ ಆವರಣದ ಗೋಡೆ ಮರೆಗೆ ಮೂತ್ರ ವಿಸರ್ಜನೆ ಮಾಡುತ್ತಾರೆ. ರಾತ್ರಿ ಸಮಯದಲ್ಲಿ ಕುಡುಕರ ಮೋಜು ಮಸ್ತಿಯ ತಾಣವಾಗಿದೆ.
ಶಾಲೆಗಳ ರಜಾ ದಿನಗಳಲ್ಲಿ ಮಕ್ಕಳ ಬೇಸಿಗೆ ಶಿಬಿರ ನಡೆಸುವುದನ್ನು ಬಿಟ್ಟರೆ, ಬೇರೇನೂ ಕ್ರೀಡಾ ಚಟುವಟಿಕೆಗಳು ನಡೆಯದಂತಾಗಿದೆ. ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣದ ಇಂದಿನ ದುಸ್ಥಿತಿಗೆ ಕ್ರೀಡಾಪಟುಗಳಲ್ಲಿ ನಿರಾಸೆ ಮೂಡಿಸಿದೆ. ಕ್ರೀಡಾ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಕ್ರೀಡಾಂಗಣ ರಕ್ಷಿಸಿ, ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮುಂದಾಗಬೇಕಿದೆ.
ಸಭೆ- ಸಮಾರಂಭಕ್ಕೆ ಸೀಮಿತ: ಕ್ರೀಡಾಂಗಣವು ರಾಜಕೀಯ ಸಭೆ, ಸಮಾರಂಭ, ರಾಷ್ಟ್ರೀಯ ಹಬ್ಬಗಳಲ್ಲಿ ಕೇವಲ ಧ್ವಜಾರೋಹಣಕ್ಕೆ ಸೀಮಿತವಾಗಿದೆ. ಅಂದು ಇಲ್ಲಿಗೆ ಆಗಮಿಸುವ ರಾಜಕಾರಣಿಗಳು ಮತ್ತು ಅಧಿಕಾರಿಗಳು ಉಳಿದ ದಿನಗಳಲ್ಲಿ ಕ್ರೀಡಾಂಗಣದತ್ತ ತಿರುಗಿ ನೋಡುತ್ತಿಲ್ಲ ಎಂದು ಕ್ರೀಡಾಪಟುಗಳು ಬೇಸರ ವ್ಯಕ್ತಪಡಿಸುತ್ತಾರೆ.
ಕೋಟ್ಯಂತರ ರೂಪಾಯಿ ಅನುದಾನದಲ್ಲಿ ನಿರ್ವಣವಾದ ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣದಲ್ಲಿ ಅಗತ್ಯ ಕ್ರೀಡಾ ಸಾಮಗ್ರಿಗಳ ಜತೆಗೆ ಮೂಲಸೌಲಭ್ಯ ಇಲ್ಲದೆ ಕ್ರೀಡಾ ಚಟುವಟಿಕೆ ನಡೆಯದಂತಾಗಿದೆ. ಅಧಿಕಾರಿಗಳು ಇಲ್ಲಿನ ಅವ್ಯವಸ್ಥೆ ಸರಿಪಡಿಸಲು ಮುಂದಾಗಬೇಕು. | ಶ್ರೀಕಾಂತ ದುಂಡಿಗೌಡ್ರ, ಅಧ್ಯಕ್ಷ ಶಿಗ್ಗಾಂವಿ ಶೆಟಲ್ಕಾಕ್ ಸ್ಪೋರ್ಟ್ಸ್ ಕ್ಲಬ್ ನಿರ್ವಿುತಿ ಕೇಂದ್ರದವರು ಕ್ರೀಡಾಂಗಣ ಕಟ್ಟಡ ಸರಿಯಾಗಿ ನಿರ್ಮಾಣ ಮಾಡದಿರುವುದರಿಂದ ಜಿಲ್ಲಾ ಕ್ರೀಡಾ ಇಲಾಖೆ ಸುಪರ್ದಿಗೆ ಪಡೆದುಕೊಂಡಿಲ್ಲ. ಹೊರಾಂಗಣ ಗ್ಯಾಲರಿ ಸೇರಿದಂತೆ ಒಳಾಂಗಣ ಕ್ರೀಡಾಂಗಣದ ಹೊಸ ಕಟ್ಟಡ ನಿರ್ಮಾಣ ಮಾಡಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಕ್ರೀಡಾ ಇಲಾಖೆಯ ಸುಪರ್ದಿಗೆ ಒಳಪಡದೆ ಇರುವುದರಿಂದ ನಿರ್ವಹಣೆಗೆ ಅನುದಾನದ ಕೊರತೆ ಎದುರಾಗುತ್ತದೆ. ಜನಪ್ರತಿನಿಧಿಗಳು ತಾಲೂಕಿನ ಕ್ರೀಡಾಪಟುಗಳ ಬಯಕೆಗೆ ತಕ್ಕಂತೆ ಸರ್ಕಾರದಿಂದ ಕ್ರೀಡಾಂಗಣ ನಿರ್ವಹಣೆಗೆ ಅನುದಾನದ ಬಿಡುಗಡೆಗೊಳಿಸಲು ಮುತುವರ್ಜಿ ವಹಿಸಬೇಕು. | ಲತಾ ಬಿ.ಎಚ್., ಉಪ ನಿರ್ದೇಶಕಿ ಕ್ರೀಡಾ ಇಲಾಖೆ ಹಾವೇರಿ