

ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಬಳಿ ಜೇನುಗೂಡಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದು, ಕೇಶ್ವಾಪುರದ ಸೇಂಟ್ ಮೈಕಲ್ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಅವಘಡ ಸಂಭವಿಸಿದೆ.
ಪರೀಕ್ಷೆ ಕೊಠಡಿಗೆ ನುಗ್ಗಿದ ಜೇನುಹುಳುಗಳು ಪೊಲೀಸ್ ಸಿಬ್ಬಂದಿ, ಶಿಕ್ಷಕರು ಹಾಗೂ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಕಚ್ಚಿವೆ. ಸೋಮವಾರ ಗಣಿತ ವಿಷಯ ಪರೀಕ್ಷೆ ನಡೆಯುತ್ತಿತ್ತು. ಎಲ್ಲವೂ ಸುಸೂತ್ರವಾಗಿಯೇ ನಡೆಯುತ್ತಿತ್ತು. ಯಾರೋ ಕಿಡಿಗೇಡಿಗಳು ಜೇನುಗೂಡಿಗೆ ಕಲ್ಲು ಎಸೆದಿದ್ದು, ಎಕ್ಸಾಂ ಹಾಲ್ ತುಂಬಾ ಆವರಿಸಿದ ಜೇನುಹುಳುಗಳು ದಾಳಿ ಮಾಡಿದ್ದು, ಭಯದಿಂದ ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಹೊರ ಓಡಿದರು.
ಇಬ್ಬರು ವಿದ್ಯಾರ್ಥಿಗಳು, ಮುಖ್ಯಶಿಕ್ಷಕ, ದೈಹಿಕ ಶಿಕ್ಷಕ, ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು ಐವರನ್ನು ಕಚ್ಚಿವೆ. ಜೇನು ಕಡಿತಕ್ಕೊಳಗಾದವರನ್ನ ಕಿಮ್ಸ್ಗೆ ದಾಖಲಿಸಲಾಗಿದೆ.