

ಮಂಗಳೂರು: ನಾಳೆಯಿಂದ(ಜು.19 ಮತ್ತು 22) ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಂಗಳೂರಿನ ವಿದ್ಯಾರ್ಥಿನಿ ಆದಿ ಸ್ವರೂಪ ವಿಶೇಷವಾಗಿ ಸಿದ್ಧತೆ ಮಾಡಿಕೊಂಡಿದ್ದು, ಅವಳ ಈ ಸಿದ್ಧತೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ.
ಅರೇ, ಪರೀಕ್ಷೆಗೆ ಮಾಡಿಕೊಂಡ ಸಿದ್ಧತೆಯೂ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಲಾಗುತ್ತಾ! ಎಂದು ಆಶ್ಚರ್ಯವಾದರೂ ಇದು ನಿಜ. ಎಸ್ಸೆಸ್ಸೆಲ್ಸಿ ಪಠ್ಯದ ಎಲ್ಲ 6 ವಿಷಯಗಳನ್ನೂ ಆದಿ ಸ್ವರೂಪ ಎ4 ಗಾತ್ರದ ನಾಲ್ಕು ಪುಟಗಳಲ್ಲೇ ಸಂಗ್ರಹಿಸಿದ್ದಾಳೆ. ‘ವಿಶುವಲ್ ಮೆಮೊರಿ ಆರ್ಟ್’ ವಿಧಾನವನ್ನು ಇಲ್ಲಿ ಬಳಸಲಾಗಿದ್ದು, 93 ಸಾವಿರ ಸಣ್ಣ ಚಿತ್ರಗಳಿವೆ. ಕೆಲವು ಕಡೆ ಹೆಸರು ಬಳಕೆ ಮಾಡಿದ್ದಾಳೆ. ಚಿತ್ರಗಳು ಕನ್ನಡ, ವಿಜ್ಞಾನ, ಗಣಿತ ಸಹಿತ ಎಲ್ಲ ವಿಷಯಗಳ ಪಠ್ಯವನ್ನೂ ಒಳಗೊಂಡಿರುವುದು ವಿಶೇಷ. ಕಲಿತದ್ದನ್ನೆಲ್ಲ ನೆನಪಿನಲ್ಲಿ ಉಳಿಸಿಕೊಳ್ಳಲು ಈ ವಿಧಾನ ಸಹಕಾರಿ ಎನ್ನುತ್ತಾಳೆ.
16 ವರ್ಷದ ಆದಿ ಸ್ವರೂಪ ಶಾಲೆಗೆ ತೆರಳದೆ ನೇರ ಪರೀಕ್ಷೆ ಬರೆಯುತ್ತಿದ್ದು, ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುವ ವಿಶ್ವಾಸ ಹೊಂದಿದ್ದಾಳೆ. ಈಕೆ ‘ಸ್ವರೂಪ ಅಧ್ಯಯನ ಕೇಂದ್ರ’ದ ನಿರ್ದೇಶಕ ಗೋಪಾಡ್ಕರ್ ಮತ್ತು ಪ್ರಾಂಶುಪಾಲೆ ಸುಮಾಡ್ಕರ್ ದಂಪತಿ ಪುತ್ರಿ.
ಸ್ವರೂಪ ಅಧ್ಯಯನ ಸಂಸ್ಥೆಯು ಮಕ್ಕಳಿಗೆ ಸರಳವಾಗಿ ಕಲಿಯುವ ಮತ್ತು ಮಿದುಳಿನ ಸಾಮರ್ಥ್ಯ ಹೆಚ್ಚಿಸುವ 10 ಕಲಿಕಾ ಕ್ರಮಗಳನ್ನು ಹೊಂದಿದೆ. ಅದರಲ್ಲಿ ‘ವಿಶುವಲ್ ಮೆಮೊರಿ ಆರ್ಟ್’ ಕೂಡ ಒಂದು. ಆದಿ ಸ್ವರೂಪ ಮಾಧ್ಯಮಗಳ ಮುಂಭಾಗ ಸಂಪೂರ್ಣವಾಗಿ ಚಿತ್ರಗಳ ಮೂಲಕ ಅಧ್ಯಯನ ಮಾಡುವ, ಪಾಠ ಮಾಡುವ ಪ್ರಾತ್ಯಕ್ಷಿಕೆ ನಡೆಸಿದರು. ಮುಂದಿನ ದಿನಗಳಲ್ಲಿ ಚಿತ್ರದ ಮೂಲಕ ಒಂದು ದಿನದಲ್ಲೇ ಎಸ್ಸೆಸ್ಸೆಲ್ಸಿ ಪಠ್ಯ ಮುಗಿಸುವ ದಾಖಲೆ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.