ಪರ್ಸೆಂಟೇಜ್ ಲೆಕ್ಕದಲ್ಲಿ ಪಿಡಿಒಗಳನ್ನು ಲಂಚಕ್ಕಾಗಿ ಪೀಡಿಸುತ್ತಿದ್ದ ಶ್ರೀರಂಗಪಟ್ಟಣ ತಾಪಂ ಇಒ! ಆಡಿಯೋ-ವಿಡಿಯೋ ವೈರಲ್​

bairappa
Published on

ಮಂಡ್ಯ: ಲಂಚಕ್ಕಾಗಿ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಕಿರುಕುಳ ನೀಡಲಾಗ್ತಿದೆ. ಪರ್ಸೆಂಟೇಜ್ ಲೆಕ್ಕದಲ್ಲಿ ಲಂಚ ಕೊಡದಿದ್ದಲ್ಲಿ ಇಲ್ಲಸಲ್ಲದ ಕ್ಯಾತೆ ತೆಗೆದು ಮೇಲಧಿಕಾರಿಗೆ ದೂರು ಕೊಡುವುದಾಗಿ ಬೆದರಿಸುತ್ತಿರುವ ಆರೋಪ ಶ್ರೀರಂಗಪಟ್ಟಣದ ತಾಪಂ ಇಒ ಬೈರಪ್ಪ ವಿರುದ್ಧ ದಟ್ಟವಾಗಿ ಕೇಳಿಬಂದಿದೆ.

ಶ್ರೀರಂಗಪಟ್ಟಣ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯ ಹಣದಾಹಕ್ಕೆ ಬೇಸತ್ತ ತಾಲೂಕು ವ್ಯಾಪ್ತಿಯ ಪಿಡಿಒಗಳು ಪಂಚಾಯತ್ ರಾಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ದೂರು ನೀಡಿದ್ದಾರೆ. ಕಾಮಗಾರಿ ಹಾಗೂ ಯೋಜನೆಗಳ ಬಿಲ್ ಮಂಜೂರು ಮಾಡಲು ಶೇ.4ರಿಂದ ಶೇ.20 ಪರ್ಸಂಟೇಜ್‌ ಹಣಕ್ಕಾಗಿ ಇಒ ಪೀಡಿಸುತ್ತಿದ್ದಾರಂತೆ. ಪರ್ಸೆಂಟೇಜ್ ನೀಡಲಿಲ್ಲ ಅಂದ್ರೆ ಬಿಲ್ ಮಂಜೂರು ಮಾಡಲ್ಲವಂತೆ. ಇ-ಸ್ವತ್ತು ಮಾಡಿಸುವವರಿಂದಲೂ ಹಣ ಪಡೆದು ತನಗೂ ಕೊಡಿ ಎಂದು ಪಿಡಿಒಗಳಿಗೆ ಇಒ ತಾಕೀತು ಮಾಡಿದ್ದಾರಂತೆ.

ಇಒ ಬೈರಪ್ಪರ ಕಿರುಕಳಕ್ಕೆ ಬೇಸತ್ತ ಪಿಡಿಒಗಳು ಪಂಚಾಯತ್ ರಾಜ್ಯ ಇಲಾಖೆಯ ಪ್ರದಾನ ಕಾರ್ಯದರ್ಶಿಗೆ ದೂರು ಕೊಟ್ಟಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಬೈರಪ್ಪ ಪರ್ಸಂಟೇಜ್ ಕೇಳುತ್ತಿರುವ ಆಡಿಯೋ -ವಿಡಿಯೋ ವೈರಲ್ ಆಗಿದೆ.

ಮೇಲ್ನೋಟಕ್ಕೆ ಆರೋಪ ಸಾಬೀತು: ಶ್ರೀರಂಗಪಟ್ಟಣ ತಾಪಂ ಇಒ ಲಂಚಕ್ಕಾಗಿ ಪಿಡಿಒಗಳನ್ನು ಪೀಡಿಸಿದ ಪ್ರಕರಣ ಕುರಿತು ಮಂಡ್ಯ ಜಿಪಂ ಸಿಒಒ ದಿವ್ಯ ಪ್ರಭು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಪಿಡಿಒಗಳು ದೂರು ಕೊಟ್ಟಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ತನಿಖೆ ನಡೆಸಿ ವರದಿ ನೀಡಿದ್ದಾರೆ. ಮೇಲ್ನೋಟಕ್ಕೆ ಹಣಕ್ಕಾಗಿ ಇಒ ಒತ್ತಡ ಹಾಕಿದ್ದಾರೆ ಎಂದು ವರದಿ ಕೊಟ್ಟಿದ್ದಾರೆ. ಆಡಿಯೋ-ವೀಡಿಯೋ ಸಾಕ್ಷಿ ಎಲ್ಲವನ್ನೂ ಸೇರಿಸಿ ಸರ್ಕಾರಕ್ಕೆ ವರದಿ ಕಳಿಸಲಾಗುವುದು. ಇಒ ಅಮಾನತು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಸಿಇಒ ಬಗ್ಗೆಯೂ ಆಡಿಯೋದಲ್ಲಿ ಆರೋಪ ಮಾಡಿದ್ದಾರೆ. ಸೋಲಾರ್ ದೀಪದ ವಿಚಾರವಾಗಿ ಮಾತನಾಡಿದ್ದಾರೆ. ನನ್ನ ಸಮಯದಲ್ಲಿ ಯಾವುದೇ ಯೋಜನೆ ಆಗಿಲ್ಲ. ನಾನು ಜಿಲ್ಲೆಗೆ ಬಂದಾಗಿನಿಂದಲೂ ಅಭಿವೃದ್ಧಿಗಾಗಿ ಕೆಲಸ‌ ಮಾಡಿದ್ದೇನೆ‌. ನನ್ನ ವಿರುದ್ಧದ ಆರೋಪ ಸತ್ಯಕ್ಕೆ ದೂರವಾಗಿದೆ. ಅವರು ಗ್ರೂಪ್‌ ಎ ಹಂತದ ಅಧಿಕಾರಿ ಆಗಿರೋದರಿಂದ ನಾನು ಕ್ರಮ ತೆಗೆದುಕೊಳ್ಳಲು ಆಗಲ್ಲ. ಸರ್ಕಾರವೇ ಕ್ರಮ ಜರುಗಿಸುತ್ತೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net