

ಶ್ರೀರಂಗಪಟ್ಟಣ: ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ಎರಡು ಸಮುದಾಯದ ನಡುವಿನ ಘರ್ಷಣೆಯಿಂದಾಗಿ ಸುಮಾರು 20 ವರ್ಷಗಳಿಂದ ಬಾಗಿಲು ಮುಚ್ಚಿದ್ದ ಈಶ್ವರ ಮತ್ತು ಚಾಮುಂಡೇಶ್ವರಿ ದೇವಸ್ಥಾನ ವಿವಾದ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ಇದೀಗ ಇತ್ಯರ್ಥಗೊಂಡಿದ್ದು, ಶಾಸಕರ ಸಮ್ಮುಖದಲ್ಲಿ ದೇವಸ್ಥಾನದ ಬಾಗಿಲು ತೆರೆದು ದೇವರಿಗೆ ಪೂಜೆ ಸಲ್ಲಿಸಲಾಯಿತು.
ಏನಿದು ವಿವಾದ?: ಜಕ್ಕನಹಳ್ಳಿ ಗ್ರಾಮದಲ್ಲಿ 20 ವರ್ಷದ ಹಿಂದೆ ಕಾವೇರಿ ಬೋರೇದೇವರ ಉತ್ಸವದ ವೇಳೆ ಚಾಮುಂಡೇಶ್ವರಿ ದೇವಾಲಯ ಪ್ರವೇಶ ವಿಚಾರದಲ್ಲಿ ಗ್ರಾಮದ ಸವರ್ಣೀಯರು ಮತ್ತು ದಲಿತ ಸಮುದಾಯದ ನಡುವೆ ವಿವಾದ ಏರ್ಪಟ್ಟು ಘರ್ಷಣೆ ಉಂಟಾಗಿತ್ತು. ಅಂದು ತಾಲೂಕು ಆಡಳಿತ ಸೆಕ್ಷನ್ 144 ಜಾರಿಗೊಳಿಸಿತ್ತು. ಇದಾದ ಬಳಿಕ ಹಲವು ಬಾರಿ ಜಿಲ್ಲಾ ಮತ್ತು ತಾಲೂಕು ಆಡಳಿತದ ಸಮ್ಮುಖದಲ್ಲಿ ಸಂಧಾನ ಸಭೆ, ಶಾಂತಿಸಭೆ ನಡೆಸಿದ್ದರೂ ಸಮಸ್ಯೆ ಬಗೆಹರಿದಿರಲಿಲ್ಲ.
ಘಟನೆ ಸಂಬಂಧ ಮಾಹಿತಿ ಪಡೆದುಕೊಂಡಿದ್ದ ರವೀಂದ್ರ ಶ್ರೀಕಂಠಯ್ಯ, ತಾಲೂಕು ಆಡಳಿತದ ಅಧಿಕಾರಿಗಳ ಸಹಕಾರದೊಂದಿಗೆ ಬುಧವಾರ ಎರಡೂ ಸಮುದಾಯದವರೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಇತಿಶ್ರೀ ಹಾಡಿದರು.
ದೇವಸ್ಥಾನಕ್ಕೆ ತಾಲೂಕು ಆಡಳಿತದಿಂದ ಹಾಕಲಾಗಿದ್ದ ಬೀಗವನ್ನು ಎಲ್ಲರ ಸಮ್ಮುಖದಲ್ಲಿ ಒಡೆದು ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಅಂತೆಯೇ ಪೂಜೆ ಸಲ್ಲಿಸಿ ದೇವರಿಗೆ ನಮಿಸಿದರು. 20 ವರ್ಷದ ಹಿಂದೆ ಚಾಮುಂಡೇಶ್ವರಿ ದೇವಿಗೆ ತೊಡಿಸಿದ್ದ ಕೆಂಪುಬಣ್ಣದ ಸೀರೆ ಹೊಳಪು ಹಾಗೇ ಕಂಗೊಳಿಸುತ್ತಿದ್ದ ದೃಶ್ಯ ಗಮನ ಸೆಳೆಯಿತು.
ಗ್ರಾಮದ ಎರಡೂ ಸಮುದಾಯಗಳ ನಡುವಿನ ಬಿಗುವಿನ ವಾತಾವರಣ ತಿಳಿಯಾಗಿ ಸಾಮರಸ್ಯದ ಬಾಳ್ವೆಯ ಸಂಕೇತವಾಗಿರುವ ದೇವಾಲಯವನ್ನು ಭಕ್ತರಿಗಾಗಿ ಮುಕ್ತ ಮಾಡಲಾಗಿದೆ. ಇದು ಕಾರ್ಯಾಂಗ ಹಾಗೂ ಶಾಸಕಾಂಗದ ತೀರ್ಮಾನವಾಗಿದ್ದು, ಇದನ್ನು ಗ್ರಾಮಸ್ಥರು ಪಾಲಿಸಬೇಕು. ಗ್ರಾಮದ ಪ್ರತಿ ಸಮುದಾಯದ ಯಜಮಾನರನ್ನು ಪ್ರತಿನಿಧಿಗಳನ್ನಾಗಿಸಿ ದೇವಾಲಯದ ಆಡಳಿತ ಮಂಡಳಿ ರಚಿಸಲಾಗುವುದು. ಹಳೇ ಘಟನೆಗಳನ್ನು ಮರೆತು ದೇವಾಲಯ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಮನವಿ ಮಾಡಿದರು.
ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ ಮಾತನಾಡಿ, ಶಾಸಕರ ಕಾಳಜಿಯಿಂದ ಗ್ರಾಮಸ್ಥರ ಸಮ್ಮುಖದಲ್ಲೇ ಗ್ರಾಮಸಭೆ ನಡೆದಿದೆ. ಕೆಲವರ ವಿರೋಧದಿಂದ ಸಹ ಭೋಜನ ಮತ್ತು ದೇವರ ಮೆರವಣಿಗೆ ವಿಚಾರವಾಗಿ ಸಂಘರ್ಷ ಏರ್ಪಟ್ಟು ಪುರಾತನ ದೇವಾಲಯ ಬಾಗಿಲು ಮುಚ್ಚಿತ್ತು. ಎಲ್ಲರ ಸಹಕಾರದಿಂದ ದೇವಾಲಯ ಮುಕ್ತವಾಗಿದ್ದು, ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಗ್ರಾಮದ ಮುಖಂಡ ಬಾಲು ಮಾತನಾಡಿ, ದೇವಾಲಯದ ಸಂರ್ಷ ತಿಳಿಗೊಳಿಸುವಂತೆ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ, ಯುವ ಮುಖಂಡ ಸಂತೋಷ್, ರೈತ ಮುಖಂಡ ನಂಜುಂಡೇಗೌಡ ಅವರಲ್ಲಿ ಮಾಡಿದ ಮನವಿಗೆ ಮೌಲ್ಯ ದೊರೆಯಲಿಲ್ಲ. ರವೀಂದ್ರ ಶ್ರೀಕಂಠಯ್ಯ ಅವರಿಂದ ಮುಖಂಡರ ನಡುವಿನ ವೈಷಮ್ಯ ತಿಳಿಯಾಗಿದೆ ಎಂದರು.
ಶಾಸಕ, ಅಧಿಕಾರಿಗಳಿಗೆ ಸನ್ಮಾನ: ದೇವಾಲಯದ ಅಭಿವೃದ್ಧಿಗೆ 5 ಲಕ್ಷ ರೂ. ಅನುದಾನ ನೀಡುವುದಾಗಿ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಘೋಷಣೆ ಮಾಡಿದರು. ಅಂತೆಯೇ ದೇವಸ್ಥಾನದ ಅಭಿವೃದ್ಧಿಗಾಗಿ ಮುಜರಾಯಿ ಇಲಾಖೆಗೆ ಪತ್ರ ಬರೆಯುವ ಜತೆಗೆ ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. ಬಳಿಕ ವೈಮನಸ್ಸು ದೂರ ಮಾಡಿದ ಶಾಸಕರು, ಅಧಿಕಾರಿಗಳನ್ನು ಗ್ರಾಮಸ್ಥರು ಸನ್ಮಾನಿಸಿದರು.
ಸಿಪಿಐ ವಿವೇಕಾನಂದ, ಟಿ.ಎಂ. ಹೊಸೂರು ಗ್ರಾಪಂ ಉಪಾಧ್ಯಕ್ಷ ಶಿವಮೂರ್ತಿ, ಸದಸ್ಯೆ ಸಂಜೀವಮ್ಮ, ಮುಖಂಡರಾದ ಬಾಲಕೃಷ್ಣ, ದೇವಾಲಯದ ಸೇವಾ ಸಮಿತಿ ಸದಸ್ಯರಾದ ಯಜಮಾನ್ ಮರೀಗೌಡ, ಯಜಮಾನ್ ಚಾಮಯ್ಯ, ಪಟೇಲ್ ಆನಂದ್, ಸ್ಕೂಲ್ ಮಾಸ್ಟರ್ ಚೌಡಯ್ಯ, ಕಾಳೇಗೌಡ, ಸ್ವಾಮಿಗೌಡ, ತಿಮ್ಮೇಗೌಡ, ವಿಷಕಂಠು, ಜವರೇಗೌಡ, ಮಹದೇವು, ಕಾಂಗ್ರೆಸ್ ಮುಖಂಡ ಪಾಲಹಳ್ಳಿ ಚಂದ್ರಶೇಖರ್ ಇತರರಿದ್ದರು.