ದೇವಸ್ಥಾನದಲ್ಲಿ ಸತ್ತವರ ಫೋಟೋ ಏಕೆ? ಎನ್ನುತ್ತಲೇ ಮೈಸೂರು ಮಹಾರಾಜರ ಫೋಟೋಗಳನ್ನ ಕೆಳಗಿಳಿಸಿದ ಅಧಿಕಾರಿ!

br hill templ
Published on

ಚಾಮರಾಜನಗರ: ದೇವಸ್ಥಾನದಲ್ಲಿ ಸತ್ತವರ ಫೋಟೋಗಳನ್ನೇಕೆ ಹಾಕಿದ್ದೀರಿ? ಎನ್ನುತ್ತಲೇ ಮೈಸೂರು ಮಹಾರಾಜರ ಫೋಟೋಗಳನ್ನ ತೆರವು ಮಾಡಿದ್ದು, ಹಿರಿಯ ಅಧಿಕಾರಿಯ ಈ ಸೂಚನೆ ವಿವಾದಕ್ಕೀಡಾಗಿದೆ.

ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ಅವರ ಫೋಟೋಗಳನ್ನು ಹಾಕಲಾಗಿತ್ತು. ದೇಗುಲಕ್ಕೆ ಮೈಸೂರು ಮಹಾರಾಜರು ಸಾಕಷ್ಟು ಚಿನ್ನ-ಬೆಳ್ಳಿ ಆಭರಣಗಳನ್ನು ಕೊಡುಗೆಯಾಗಿ ಕೊಟ್ಟಿದ್ದರಲ್ಲದೆ, ದೇಗುಲ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದರು. ದೇವಸ್ಥಾನದ ಏಳಿಗೆಗೆ ಮಹಾರಾಜರ ಕೊಡುಗೆಯ ನೆನಪಿಗಾಗಿ ಅವರ ಫೋಟೋಗಳನ್ನು ದೇಗುಲದಲ್ಲಿ ಹಾಕಲಾಗಿತ್ತು.

ಇತ್ತೀಚಿಗೆ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯವೂ ನಡೆದಿತ್ತು. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಯೊಬ್ಬರು, ಸತ್ತವರ ಫೋಟೋಗಳನ್ನು ಇಲ್ಲಿ ಏಕೆ ಹಾಕಿದ್ದೀರಿ? ತೆಗೆದು ಹಾಕಿ ಎಂದಿದ್ದರಿಂದ ಅಲ್ಲಿನ ಸಿಬ್ಬಂದಿ ಬೇರೆ ದಾರಿ ಕಾಣದೆ ಆ ಫೋಟೋಗಳನ್ನು ತೆಗೆದಿದ್ದು, ದೇಗುಲದ ಆಡಳಿತ ಮಂಡಳಿಯ ಕಚೇರಿಯಲ್ಲಿ ಇಡಲಾಗಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಚಾಮರಾಜನಗರ ಜಿಲ್ಲಾಡಳಿತದ ವಿರುದ್ಧ ಭಕ್ತರು ಆಕ್ರೋಶ ಹೊರ ಹಾಕಿದ್ದಾರೆ. ಇದು ಮೈಸೂರು ಮಹಾರಾಜರಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net