

ಹುಬ್ಬಳ್ಳಿ: ಕ್ರೀಡೆ ಎನ್ನುವುದು ಪ್ರತಿಯೊಬ್ಬರ ಆರೋಗ್ಯಕರ ಜೀವನಕ್ಕೆ ಟಾನಿಕ್ ಇದ್ದಂತೆ. ಮನೋದೈಹಿಕವಾಗಿ ಸದೃಢವಾಗಿದ್ದರೆ ಮಾತ್ರ ನೆಮ್ಮದಿ ಮತ್ತು ಶಾಂತಿಯಿಂದ ಜೀವನ ನಡೆಸಬಹುದು. ಕ್ರೀಡಾಪಟುಗಳು ನಿರಂತರ ಅಭ್ಯಾಸದಲ್ಲಿ ತೊಡಗಿದರೆ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಭಾರತದ ಅಂತಾರಾಷ್ಟ್ರೀಯ ಕ್ರೀಡಾಪಟು ಸಹನಾಕುಮಾರಿ ಗೊಬ್ಬರಗುಂಪಿ ಅಭಿಪ್ರಾಯಪಟ್ಟರು.
ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ಹಾಗೂ ಕರ್ನಾಟಕ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ನಗರದ ಕೆಎಂಸಿಆರ್‌ಐ ಕ್ರೀಡಾಂಗಣದಲ್ಲಿ ನಾಲ್ಕು ದಿನಗಳವರೆಗೆ ಆಯೋಜಿಸಿರುವ ಅಂತರ ಕಾಲೇಜ್ ಅಥ್ಲೆಟಿಕ್ ಕೂಟ-2024 ಅನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಿಂದ ಮನಸ್ಸು ಸದಾಕಾಲ ಸಂತಸದಿಂದ ಕೂಡಿರುತ್ತದೆ. ಕ್ರೀಡಾಪಟುಗಳು ನಿರಂತರ ಅಭ್ಯಾಸ ಮಾಡಿದರೆ ಪದಕ ಗೆಲ್ಲುವುದು ಕನಸೇನಲ್ಲ. ನಾವು ಯಾವುದೇ ಕ್ಷೇತ್ರದಲ್ಲಿದ್ದರೂ ನಿರಂತರ ಅಭ್ಯಾಸ ಮಾಡಿದರೆ ಸಾಧನೆ ನಮ್ಮ ಬಳಿಯೇ ಬರುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಫಿಟ್ ಇಂಡಿಯಾ ಜಾರಿಗೆ ತಂದಿದ್ದಾರೆ. ಆದರೆ ಎಷ್ಟು ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಮೋದಿ ಅವರು ಕ್ರೀಡಾಕೂಟಕ್ಕೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.
ಆರ್‌ಜಿಯುಎಚ್‌ಎಸ್ ಉಪಕುಲಪತಿ ಡಾ.ಎಂ.ಕೆ. ರಮೇಶ ಮಾತನಾಡಿ, ವೈದ್ಯಕೀಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಹೆಚ್ಚಿಗೆ ಇರುತ್ತದೆ. ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಒತ್ತಡಕ್ಕೆ ಮುಕ್ತಿ ಸಿಗಲಿದೆ ಎಂದರು.
ವಿದ್ಯಾರ್ಥಿಗಳು ಒಂದಲ್ಲ ಒಂದು ಕ್ರೀಡೆಯಲ್ಲಿ ಭಾಗವಹಿಸುವುದು, ಓದುವುದು ಹವ್ಯಾಸವಾಗಿಸಿಕೊಳ್ಳಬೇಕು. ನಿರಂತರ ಅಧ್ಯಯನದಿಂದ ಅಂಕ ಮಾತ್ರ ಗಳಿಸಬಹುದು ಆರೋಗ್ಯಯುತ ಜೀವನವಲ್ಲ. ಅಂಕಗಳೇ ಜೀವನಕ್ಕೆ ಮುಖ್ಯವಲ್ಲ. ಕ್ರೀಡಾಸ್ಫೂರ್ತಿ, ಮನೋಭಾವದಿಂದ ಮಾತ್ರ ಸಾಧ್ಯ. ಯಾವುದೇ ವೃತ್ತಿಯಾದರೂ ಅದು ವೃತ್ತಿ ಅಷ್ಟೇ, ಜೀವನವಲ್ಲ. ನಮ್ಮ ದೇಶದಲ್ಲಿ ನೂರಾರು ಕ್ರೀಡೆಗಳಿದ್ದರೂ ಕ್ರಿಕೆಟ್‌ಗೆ ಆದ್ಯತೆ ನೀಡಲಾಗುತ್ತಿದೆ. ಇತರ ಕ್ರೀಡೆಗಳು ಬೆಳೆಯಲು ಅವಕಾಶ ನೀಡುತ್ತಿಲ್ಲ. ಕ್ರೀಡಾಪಟುಗಳು ಕಬಡ್ಡಿ, ವಾಲಿಬಾಲ್, ಫುಟ್‌ಬಾಲ್‌ಗಳಂತಹ ಆಟಕ್ಕೆ ಮಹತ್ವ ನೀಡಬೇಕು ಎಂದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ದೇಶದಲ್ಲಿ ಕ್ರೀಡಾಕೂಟವನ್ನು ಪಠ್ಯೇತರ ಚಟುವಟಿಕೆಯಾಗಿ ನೋಡಲಾಗುತ್ತಿದೆ. ಅದು ಪ್ರತಿಯೊಬ್ಬರ ಜೀವನದ ಅಂಗವಾಗಬೇಕು. ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡಾಕೂಟ ಬಹಳ ಅಗತ್ಯ. ಕ್ರೀಡೆಯಂತೆಯೇ ಜೀವನದಲ್ಲಿ ಹಲವಾರು ಅಡೆತಡೆಗಳು ಬರುತ್ತವೆ. ಅವುಗಳನ್ನು ಎದುರಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಕ್ರೀಡೆಯಲ್ಲಿ ಪ್ರತಿಯೊಬ್ಬರಿಗೂ ತನ್ನನ್ನು ತಾನೇ ಸ್ಪರ್ಧಿಯಾಗಿ ನೋಡಿಕೊಳ್ಳುವ ಮನೋಭಾವ ಬೆಳೆಸಿಕೊಡುತ್ತದೆ. ಇದು ಜೀವನದ ಯಶಸ್ವಿಗೆ ಸಹಕಾರಿಯಾಗಲಿದೆ ಎಂದರು.
ಕೆಎಂಸಿಆರ್‌ಐ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ವೈದ್ಯಕೀಯ ಅಧೀಕ್ಷಕರಾದ ಡಾ. ಈಶ್ವರ ಹಸಬಿ, ಡಾ. ರಾಜಾಶಂಕರ ಎಸ್., ಪ್ರಾಚಾರ್ಯ ಡಾ. ಗುರುಶಾಂತಪ್ಪ ಯಲಗಚ್ಚಿನ, ಸಿಎಒ ರಮೇಶ ಕಳಸದ, ಡಾ.ಎಂ.ಎಸ್. ರೋಣದ, ಇತರರು ಇದ್ದರು.
ಬಾಕ್ಸ್..
ಸ್ಟಿಪಲ್ ಚೇಸ್ ವಿಜೇತರಿಗೆ ಬಹುಮಾನ
ಮೂರುಸಾವಿರ ಮೀಟರ್ ಸ್ಟಿಪಲ್ ಚೇಸ್‌ನಲ್ಲಿ ಪುರುಷರ ವಿಭಾಗದಲ್ಲಿ ಮೂಲ್ಕಿಯ ಸೇಂಟ್ ಅನ್ನಾಸಾ ನರ್ಸಿಂಗ್ ಕಾಲೇಜಿನ ಮೂರ್ಯ ಫೌಲೆ ಪ್ರಥಮ(12:20.25ಸೆಕೆಂಡ್), ಮೈಸೂರಿನ ಸುಯೋಗ ನರ್ಸಿಂಗ್ ಕಾಲೇಜಿನ ಇರ್ಫಾನ್‌ಖಾನ್ ಎಸ್. ದ್ವಿತೀಯ(12:37.74ಸೆಕೆಂಡ್), ಮಂಗಳೂರಿನ ಕರ್ನಾಟಕ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಸಾಗರ ನಾಗಪ್ಪ ಎನ್. ತೃತೀಯ (12:48.31ಸೆಕೆಂಡ್)ಸ್ಥಾನ ಪಡೆದರು.
ಅದೇ ರೀತಿ ಮಹಿಳೆಯರ ವಿಭಾಗದಲ್ಲಿ ಮಂಗಳೂರಿನ ಅಥೆನಾ ನರ್ಸಿಂಗ್ ಕಾಲೇಜಿನ ಸೆಲ್ಬಿ ಮಾರಿಯಾ ಜೈಸನ್ ಪ್ರಥಮ(19:00.76ಸೆಕೆಂಡ್), ಬಾಗಲಕೋಟೆಯ ಬಿವಿಎಸ್ ಸಜ್ಜಲಶ್ರೀ ನರ್ಸಿಂಗ್ ಸಂಸ್ಥೆಯ ಮೇಘಾ ದ್ವಿತೀಯ(19:39.57ಸೆಕೆಂಡ್), ಮಂಗಳೂರಿನ ಅಥೇನಾ ನರ್ಸಿಂಗ್ ಕಾಲೇಜಿನ ಎಮೆಲ್ಡಾ ಥಾಮಸ್ ತೃತೀಯ (21:33.46ಸೆಕೆಂಡ್) ಸ್ಥಾನ ಪಡೆದಿದ್ದು, ಗಣ್ಯರು ಅವರಿಗೆ ಪದಕ ನೀಡಿ ಗೌರವಿಸಿದರು.