

ಬ್ಯಾಡಗಿ: ಕ್ರೀಡಾಕೂಟದಿಂದ ವ್ಯಕ್ತಿಯಲ್ಲಿ ಶಿಸ್ತು ಹಾಗೂ ಭಾವನಾತ್ಮಕ ಸಂಬಂಧ ಬೆಸೆದು ಮನಸ್ಸಿಗೆ ಹೆಚ್ಚು ಉಲ್ಲಾಸ ನೀಡಲಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಅಮುಲ್ ಜೆ. ಹಿರೇಕುಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಎಸ್.ಜೆ.ಜೆ.ಎಂ. ಕ್ರೀಡಾಂಗಣದಲ್ಲಿ ಸ್ಥಳೀಯ ನ್ಯಾಯವಾದಿಗಳ ಸಂಘದ ವತಿಯಿಂದ ವಕೀಲರಿಗಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕ್ರಿಕೆಟ್ ಟೂರ್ನಾಮೆಂಟ್ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆಯು ಏಕಾಗ್ರತೆ ಸುಧಾರಿಸಲು ಸಹಾಯ ಮಾಡುತ್ತದೆ. ಒತ್ತಡ ಮತ್ತು ಖಿನ್ನತೆ ಕಡಿಮೆ ಮಾಡುತ್ತದೆ. ಆಲೋಚನಾ ಸಾಮರ್ಥ್ಯ ಮತ್ತು ಜೀವನದ ಗುಣಮಟ್ಟ ಸುಧಾರಿಸಲಿದೆ. ಕ್ರೀಡೆಗಳಲ್ಲಿ ವ್ಯಕ್ತಿಗೆ ಬೇಕಾದ ದೈಹಿಕ ಮತ್ತು ಭಾವನಾತ್ಮಕ ಪ್ರಯೋಜನಗಳಿದ್ದು, ಶಿಸ್ತು ಮತ್ತು ಸಮಯಪ್ರಜ್ಞೆ ಬೆಳೆಸುವುದರ ಜತೆಗೆ ಸಮುದಾಯದಲ್ಲಿ ಸೌಹಾರ್ದತೆ ರೂಪಿಸಲಿದೆ ಎಂದರು.
ಕಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ಕ್ರೀಡೆಗಳು ಸ್ನಾಯುವಿನ ಬಲವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವಕೀಲರು ತಮ್ಮ ವೃತ್ತಿಯಲ್ಲಿ ತೊಡಗಿಕೊಂಡು ಕೆಲವೊಮ್ಮೆ ಆರೋಗ್ಯದ ಕಡೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಯಾವುದೇ ಕಾರಣಕ್ಕೂ ಆರೋಗ್ಯ ನಿರ್ಲಕ್ಷ್ಯ ಬೇಡ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಎನ್. ರ್ಬಾ, ಉಪಾಧ್ಯಕ್ಷ ಬಿ.ಜಿ. ಹಿರೇಮಠ, ವಕೀಲರಾದ ಎಂ.ಪಿ. ಹಂಜಗಿ, ಎಫ್.ಎಂ. ಮುಳುಗುಂದ, ಪಿ.ಆರ್. ಮಠದ, ಪ್ರಭು ಶೀಗಿಹಳ್ಳಿ, ಎಂ.ಜೆ. ಮುಲ್ಲಾ, ಆರ್.ಸಿ. ಶಿಡೇನೂರ, ಪ್ರಕಾಶ ಬನ್ನಿಹಟ್ಟಿ. ಎನ್ .ಎಸ್. ಬಟ್ಟಲಕಟ್ಟಿ, ಲಿಂಗರಾಜ ಬನ್ನಿಹಟ್ಟಿ, ಸುರೇಶ ಕಾಟೇನಹಳ್ಳಿ, ಮಂಜುನಾಥ ಕುಮ್ಮೂರ ಇತರರಿದ್ದರು.