

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಪೌರಕಾರ್ಮಿಕರ ಒತ್ತಡ ನಿವಾರಣೆಗೆ ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದು ನಗರಸಭೆ ಅಧ್ಯಕ್ಷೆ ಲತಾ ಹೇಮಂತ್‌ಕುಮಾರ್ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಗರಸಭೆ ಕಾರ್ಯಾಲಯದಿಂದ ಪೌರಕಾರ್ಮಿಕರ ದಿನದ ಅಂಗವಾಗಿ ಕಾರ್ಮಿಕರಿಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ನಿತ್ಯದ ಕರ್ತವ್ಯದ ಜತೆಗೆ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ಕುಟುಂಬದ ಆರೋಗ್ಯವನ್ನು ಕಾಯ್ದುಕೊಳ್ಳಬೇಕು. ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಕಡೆಗಣಿಸದೆ ತಪಾಸಣೆ ಮಾಡಿಸಿಕೊಂಡು, ಚಿಕಿತ್ಸೆ ಪಡೆಯಬೇಕು. ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರು ಎಷ್ಟು ಪ್ರಮುಖವೋ ಪೌರಕಾರ್ಮಿಕರ ಹಿತ ಕಾಪಾಡುವುದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕರ್ತವ್ಯ. ಪೌರಕಾರ್ಮಿಕರ ದಿನದ ಪ್ರಯುಕ್ತ ಜನಪ್ರತಿನಿಧಿ, ಅಧಿಕಾರಿಗಳನ್ನು ಒಳಗೊಂಡಂತೆ ಪೌರಕಾರ್ಮಿಕರ ಕ್ರೀಡಾಕೂಟ ಆಯೋಜಿಸಿರುವ ಪೌರಾಯುಕ್ತರ ಚಿಂತನೆ ಒಳ್ಳೆಯದು ಎಂದರು.
ಪೌರಾಯುಕ್ತ ಲೋಹಿತ್ ಮಾತನಾಡಿ, ಪೌರಕಾರ್ಮಿಕರು ಇಲ್ಲದ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ನಿತ್ಯ ಬೆಳಕಾಗುತ್ತಿದ್ದಂತೆ ಕರ್ತವ್ಯಕ್ಕೆ ಹಾಜರಾಗಿ, ನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸಿ, ಆರೋಗ್ಯವಂತ ಸಮಾಜ ನಿರ್ಮಾಣ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಪೌರಕಾರ್ಮಿಕರ ಸೇವೆ ಅನನ್ಯವಾದದ್ದು. ನಿತ್ಯದ ಕೆಲಸ-ಕಾರ್ಯಗಳ ನುಡವೆಯೂ ಒಂದಿಷ್ಟು ಬಿಡುವು ನೀಡಿ, ಒತ್ತಡ ನಿವಾರಿಸುವ ಉದ್ದೇಶದಿಂದ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಆನಂದ್, ಉಪಾಧ್ಯಕ್ಷೆ ಸುಜಾತಾ ಮುನಿಯಪ್ಪ, ಸದಸ್ಯ ಎನ್.ಗಣೇಶ್, ಸುನೀಲ್‌ಮೂಡ್, ಶಿವಕುಮಾರ್, ಪೂರ್ಣಿಮಾ ಸುಗ್ಗರಾಜು, ಲೋಲಾಕ್ಷಿ ಗಂಗಧಾರ್, ಹೆಚ್ಚುವರಿ ಸದಸ್ಯ ಅಂಜನಮೂರ್ತಿ, ರಾಮಮೂರ್ತಿ, ಮುನಿರಾಜು, ಮಾಜಿ ನಾಮ ನಿರ್ದೇಶಿತ ಸದಸ್ಯ ಕೆ.ವಸಂತ್, ಮುಖಂಡ ನಾರಾಯಣ್ ರಾವ್, ಸಹಾಯಕ ಕಾರ್ಯಪಾಲ ಅಭಿಯಂತರ ನಾಗಲಿಂಗಬಡಿಗೇರ್, ಆರೋಗ್ಯ ನಿರೀಕ್ಷಕಿ ಬಿ.ಜಿ.ಮಮತಾ, ಪೌರ ನೌಕರರ ಮುಖಂಡ ಎಲ್.ಅಂಕಯ್ಯ, ಚಂದ್ರು, ಮಂಜುನಾಥ್‌ಮತ್ತಿತರರು ಇದ್ದರು.