

ಮಡಿಕೇರಿ: ತಮಿಳು ಯೂತ್ ಫೆಡರೇಶನ್ ಕೊಡಗು ಘಟಕದಿಂದ ಫೆ೧೮, ೧೯ರಂದು ತಮಿಳು ಬಾಂಧವರ ಕಾವೇರಿ ಕ್ರೀಡಾಕೂಟ-ಸಾಂಸ್ಕೃತಿಕ ಸಂಭ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಮಿಳ್ ಯೂತ್ ಫೆಡರೇಷನ್‌ನ ಪ್ರ.ಕಾರ್ಯದರ್ಶಿ ಮೋಹನ್ ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮುದಾಯದವರಿಗಾಗಿ ಅಂದು ಜಿಲ್ಲಾ ಮಟ್ಟದ ೬ನೇ ವರ್ಷದ ಕಾವೇರಿ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಸಂಭ್ರಮ ಚೆಟ್ಟಳ್ಳಿಯ ಪ್ರೌಢ ಶಾಲಾ ಮೈದಾನದಲ್ಲಿ ಜರುಗಲಿದೆ. ಎರಡು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದ್ದು, ಫೆ.೧೮ರಂದು ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಫೆ೧೯ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಅಂದು ಉಚಿತ ಅರೋಗ್ಯ ತಪಾಸಣೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಹಗ್ಗಜಗ್ಗಾಟ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮಕ್ಕಳಿಗೆ, ಯುವಕರಿಗೆ, ಯುವತಿಯರಿಗೆ, ಮಹಿಳೆಯರಿಗೆ ಹಾಗೂ ವೃದ್ಧರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯುತ್ತದೆ. ವಿಶೇಷವಾಗಿ ಪುಟಾಣಿ ಮಕ್ಕಳ ಹಗ್ಗಜಗ್ಗಾಟ ಸ್ಪರ್ಧೆ ಕೂಡ ನಡೆಲಿದೆ. ಮಧ್ಯಾಹ್ನದ ನಂತರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸಾಂಸ್ಕೃತಿಕ ನೃತ್ಯ ಸ್ಪರ್ಧೆ, ಗೀತಗಾಯನ ಸ್ಪರ್ಧೆ ಹಾಗೂ ವಿವಿಧ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದಿರುವ ಸಮುದಾಯ ಬಾಂಧವರನ್ನು ಸನ್ಮಾನಿಸಲಿದ್ದು, ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿ ಹಂತಗಳಲ್ಲಿ ಶೇ.೭೦ ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಕ್ರಿಕೆಟ್ ಪಂದ್ಯಾಟ ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಆಡಲಿಚ್ಚಿಸುವ ತಂಡಗಳು ಫೆ೧೦ ಒಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಕ್ರಿಕೆಟ್ ಪಂದ್ಯಾಟ ಸೂಪರ್ ೮ ಮಾದರಲ್ಲಿ(೮+೧) ನಡೆಯಲಿದೆ. ಹಗ್ಗಜಗ್ಗಾಟ ಹಾಗೂ ಇತರ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಯಾವುದೇ ಶುಲ್ಕ ಪಾವತಿಸದೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮದ ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ೯೧೦೮೨೫೫೨೬೬, ೯೯೪೫೧೦೩೦೧೨, ೯೫೩೫೨೮೪೯೦೪ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಜಿಲ್ಲೆಯ ನಾನಾ ಕಡೆಗಳಲ್ಲಿ ನೆಲೆಸಿರುವ ಸಮುದಾಯ ಬಾಂಧವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಮೋಹನ್ ರಾಜ್ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.