ಜಿಂಕೆಗೆ ಚೆಲ್ಲಾಟ- ರೈತನಿಗೆ ಸಂಕಟ

Jinke
Published on

ಶಿಗ್ಗಾಂವಿ: ಮುಂಗಾರು ಮಳೆ ಕೊರತೆ ಮಧ್ಯೆಯೂ ಬಿತ್ತನೆಯಾಗಿ ಬೆಳೆದು ನಿಂತಿರುವ ಅಲ್ಪಸ್ವಲ್ಪ ಬೆಳೆಗೆ ಜಿಂಕೆಗಳ ಕಾಟ ಶುರುವಾಗಿದ್ದು, ತಾಲೂಕಿನ ಅನ್ನದಾತರು ಕಂಗಾಲಾಗಿದ್ದಾರೆ.

ಕಡಿಮೆ ಖರ್ಚಿನ ಬೆಳೆ ಎಂದು ರೈತರು ಹೆಚ್ಚಾಗಿ ಸೋಯಾಬೀನ್, ಹೆಸರು, ಉದ್ದು ಬಿತ್ತನೆ ಮಾಡಿದ್ದಾರೆ. ಈ ಬೆಳೆಗಳು ಜಿಂಕೆಗಳಿಗೂ ಪ್ರಿಯವಾದ ಆಹಾರವಾಗಿದೆ. ಶಿಗ್ಗಾಂವಿ ಪಟ್ಟಣ ವ್ಯಾಪ್ತಿ, ಬಂಕಾಪುರ, ಕುಂದೂರು, ಹಿರೇಮಲ್ಲೂರ, ಚಿಕ್ಕಮಲ್ಲೂರ, ಹನುಮರಹಳ್ಳಿ, ನೆಲ್ಲೂರ, ಗುಂಡೂರ, ಕಂಕಣವಾಡ, ಗಂಜೀಗಟ್ಟಿ, ಬನ್ನಿಕೊಪ್ಪ, ಬನ್ನೂರ ಸುತ್ತಮುತ್ತ ಜಮೀನಿನಲ್ಲಿ ಕಂಡುಬರುವ ಜಿಂಕೆ ಹಿಂಡು ಪೈರು ತಿನ್ನುವ ಜತೆಗೆ ತುಳಿದು ಹಾಳು ಮಾಡುತ್ತಿವೆ. ಜಿಂಕೆಗಳು ಬೆಳೆ ತಿನ್ನುವುದಕ್ಕಿಂತ ಹೆಚ್ಚಾಗಿ ಚೆಲ್ಲಾಟವಾಡುತ್ತಾ ಹೊಲದ ತುಂಬೆಲ್ಲ ಓಡಾಡುತ್ತಿರುವುದರಿಂದ ಬೆಳೆ ಹಾಳಾಗುತ್ತಿದೆ. ರೈತರು ದಿನವಿಡೀ ಹೊಲಗಳಲ್ಲಿ ಜಿಂಕೆಗಳನ್ನು ಕಾಯುವುದೇ ಕಾಯಕವಾಗಿದೆ.

ಬೆಳೆದು ನಿಂತಿರುವ ಸೋಯಾಬೀನ್, ಹೆಸರು ಜಿಂಕೆ ಹಾವಳಿಗೆ ನೆಲಕಚ್ಚುವಂತಾಗಿದೆ. ಈ ಭಾಗದ ರೈತರು ಕೃಷಿ-ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ, ಸ್ಪಂದನೆ ಶೂನ್ಯವಾಗಿದೆ. ಇದರಿಂದಾಗಿ ಅನ್ನದಾತನ ಗೋಳನ್ನು ಯಾರೂ ಕೇಳದಂತಾಗಿದೆ. ರೈತರು ಪ್ರತಿವರ್ಷವೂ ಇದೇ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಕೃಷಿ ಇಲಾಖೆ ಮತ್ತು ಅರಣ್ಯ ಇಲಾಖೆ ಗಂಭೀರ ಚಿಂತನೆ ನಡೆಸಬೇಕಿದೆ ಎಂಬುದು ರೈತರ ಆಗ್ರಹವಾಗಿದೆ.

ಜಿಂಕೆಗಳ ಹಾವಳಿಯಿಂದ ರೈತರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಮುಂಗಾರಿನ ಬಿತ್ತನೆಯಿಂದ ಹಿಡಿದು ಹಿಂಗಾರಿನ ಬೆಳೆ ಕೊಯ್ಲಿನವರೆಗೂ ಹಗಲಿರುಳು ಜಿಂಕೆ ಕಾಯುವುದೇ ಒಂದು ಹೆಚ್ಚುವರಿ ಕೆಲಸವಾಗಿಬಿಟ್ಟಿದೆ. ಸುಮಾರು ವರ್ಷಗಳಿಂದ ರೈತರು ಜಿಂಕೆಗಳ ಹಾವಳಿಗೆ ಬೇಸತ್ತು ಹೋಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆಗಳ ಹಾವಳಿ ತಪ್ಪಿಸಲು ಮುಂದಾಗಬೇಕಾಗಿದೆ.ಹಿರೇಗೌಡ್ರ ಪಾಟೀಲ, ಹಿರೇಮಲ್ಲೂರ ಗ್ರಾಮದ ರೈತ ಜಿಂಕೆ ಸೂಕ್ಷ್ಮ ಪ್ರಾಣಿಯಾಗಿರುವುದರಿಂದ ಹಿಡಿಯುವುದು, ಬೇರೆಡೆ ಸ್ಥಳಾಂತರಿಸಲು ಬರುವುದಿಲ್ಲ. ಅದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ. ರೈತರ ಜಮೀನಿನಲ್ಲಿ ಜಿಂಕೆಗಳಿಂದ ಆಗುವ ಹಾನಿಗೆ ಅರಣ್ಯ ಇಲಾಖೆಯ ಮೂಲಕ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ. ಹಾನಿಗೊಳಗಾದ ರೈತರು ಹಾನಿಯ ಕುರಿತು ಅರಣ್ಯ ಇಲಾಖೆಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದರೆ ಪರಿಹಾರದ ವ್ಯವಸ್ಥೆ ಮಾಡಲಾಗುವುದು.ಪಂಚಾಕ್ಷರಪ್ಪ ತೆಗ್ಗಿಹಳ್ಳಿ, ದುಂಡಸಿ ವಲಯ ಅರಣ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net