ನಗರಕ್ಕೆ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ

19
Published on

ಮೈಸೂರು: ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆಯನ್ನು ಮಾಜಿ ಮೇಯರ್ ಶಿವಕುಮಾರ್ ಗುರುವಾರ ಸಾರ್ವಜನಿಕರಿಗೆ ವಿತರಿಸಿದರು.

ಕುವೆಂಪುನಗರದ ನವಿಲು ರಸ್ತೆ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳ ಮನೆಗೆ ಖುದ್ದಾಗಿ ತೆರಳಿದ ಮಾಜಿ ಮೇಯರ್, ಮನೆಯ ಎಲ್ಲ ಸದಸ್ಯರಿಗೂ ಮಂತ್ರಾಕ್ಷತೆ ವಿತರಿಸಿ ಶುಭ ಕೋರಿದರು.

ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಇದು ದೇಶದ ಪಾಲಿಗೆ ಸುದಿನವಾಗಿದೆ. ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಇಂತಹ ಮಹತ್ ಕಾರ್ಯ ನಡೆಯುತ್ತಿರುವುದು ಎಲ್ಲರ ಸುದೈವ. ಇಂತಹ ಹೊಸತನವನ್ನು ಬಿಜೆಪಿಯಿಂದ ಮಾತ್ರ ನಿರೀಕ್ಷಿಸಬಹುದಾಗಿದೆ ಎಂದು ಶಿವಕುಮಾರ್ ಹೇಳಿದರು.

ರಾಷ್ಟ್ರವನ್ನು ಬಲಪಡಿಸುವ ಉದ್ದೇಶದಿಂದ ಮೋದಿ ನೇತೃತ್ವದ ಸರ್ಕಾರ ಹಗಲಿರುಳು ಶ್ರಮ ವಹಿಸುತ್ತಿದ್ದು, ರಾಮಮಂದಿರ ನಿರ್ಮಾಣ ಇದರ ಭಾಗವಾಗಿದೆ. ಹಿಂದುಗಳ ಆರಾಧ್ಯ ದೈವ ಶ್ರೀರಾಮನ ವಿಗ್ರಹವನ್ನು ಮೈಸೂರು ಮೂಲದವರು ಕೆತ್ತನೆ ಮಾಡಿದ್ದು, ಇದೊಂದು ಸಂತಸದಾಯಕ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು.

ಮೋದಿ ಪ್ರಧಾನಿಯಾದ ಬಳಿಕ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ವಿಶ್ವವೇ ತಿರುಗಿ ನೋಡುವಂತಾಗಿದೆ. ಭಯೋತ್ಪಾದನೆಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಕೇಂದ್ರ ಅವಿರತವಾಗಿ ಶ್ರಮ ವಹಿಸುತ್ತಿದ್ದು, ನೆರೆ ರಾಷ್ಟ್ರಗಳೂ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿವೆ. ಅಲ್ಲದೆ ಜನರು ನಿರೀಕ್ಷೆ ಮಾಡಲಾಗದ್ದನ್ನು ಕೇಂದ್ರ ಸರ್ಕಾರ ಮಾಡುತ್ತಿದ್ದು, ಎಲ್ಲ ಕಾರ್ಯಗಳು ಜನಮಾನಸದಲ್ಲಿ ಬೇರೂರಿದೆ ಎಂದು ತಿಳಿಸಿದರು.
ಬಿಜೆಪಿ ಕುವೆಂಪುನಗರ ವಾರ್ಡ್ ಅಧ್ಯಕ್ಷ ಸಂಪತ್, ಮುಖಂಡರಾದ ರಾಮದಾಸ್, ಶಾಂತವೀರಪ್ಪ, ಉಪೇಂದ್ರ, ಸೋಮು, ಉಮಾ, ಮಾಲಾ, ನಾಗೇಶ್, ಕೋಮಲಾ, ಚಂದ್ರಶೇಖರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net