

ಮೈಸೂರು: ಮೇಣದಿಂದ ತಯಾರಿಸಿದ ತಂದೆಯ ಪ್ರತಿಮೆ ಮುಂದೆ ಮಗನೊಬ್ಬ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟ ಅಪರೂಪದ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಕಳೆದ ವರ್ಷ ವರನ ತಂದೆ ಕರೊನಾದಿಂದ ಮೃತಪಟ್ಟಿದ್ದರು. ತನ್ನ ಮದ್ವೆಗೆ ತಂದೆಯನ್ನ ಕರೆತರಬೇಕೆಂದು ನಿರ್ಧರಿಸಿದ ಮಗ, ಮೇಣದಲ್ಲಿ ತಂದೆಯ ಪ್ರತಿಮೆ ನಿರ್ಮಿಸಿ ಮದುವೆ ಮಂಟಪದಲ್ಲಿ ಖುರ್ಚಿ ಮೇಲೆ ಕೂರಿಸಿದ್ದರು. ತಂದೆ ಮುಂದೆಯೇ ಕುಳಿತು ಮದ್ವೆ ಶಾಸ್ತ್ರದಲ್ಲಿ ಪಾಲ್ಗೊಂಡರು. ಈ ಭಾವುಕ ಕ್ಷಣಗಳ ಫೋಟೋಗಳು ವೈರಲ್ ಆಗಿದ್ದು, ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಅಜ್ಜಂಪುರ ಮೂಲದ ಡಾ.ಯತೀಶ್ ಮತ್ತು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಲ್ಕುಂಡಿ ಗ್ರಾಮದ ಡಾ.ಅಪೂರ್ವ ದಾಪಂತ್ಯಕ್ಕೆ ಕಾಲಿಟ್ಟ ಜೋಡಿ. ಮೈಸೂರಿನ ಜೆ.ಎಸ್.ಎಸ್. ಆಯುರ್ವೇದ ಕಾಲೇಜಿನಲ್ಲಿ ಡಾ.ಯತೀಶ್ ಎಂ.ಡಿ ವ್ಯಾಸಂಗ ಮಾಡುತ್ತಿದ್ದಾರೆ.
ಡಾ.ಯತೀಶ್ ಅವರ ತಂದೆ ರಮೇಶ್ ಕಳೆದ ವರ್ಷ ಕೋವಿಡ್ನಿಂದ ಮೃತಪಟ್ಟಿದ್ದರು. ಮದುವೆ ಶಾಸ್ತ್ರಗಳಲ್ಲಿ ತಂದೆ ಪ್ರತಿಮೆ ಪಕ್ಕದಲ್ಲಿ ತಾಯಿಯನ್ನು ಕೂರಿಸಿ ಪೂಜೆಗೆ ವರ ಕುಳಿತಿರುವ ಫೋಟೋಗಳು ವೈರಲ್ ಆಗಿವೆ.