ಬಳ್ಳಾರಿ : ನಗರದ ಬಂಡಿಮೋಟ ಬಳಿಯ ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಮಂಡಳಿ ಘಟಕ ಕೇಂದ್ರಕ್ಕೆ ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಶುಕ್ರವಾರ ಸಂಜೆ ಅನಿರೀಕ್ಷಿತ ಭೇಟಿ ನೀಡಿ ಆಹಾರ ಧಾನ್ಯಗಳನ್ನು ವೀಕ್ಷಿಸಿದರು.
ಉಗ್ರಾಣದಲ್ಲಿ ಸ್ವಚ್ಛತೆ ಹಾಗೂ ಸರಿಯಾದ ನಿರ್ವಹಣೆ ಮಾಡದೇ ಇರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಉಗ್ರಾಣದಲ್ಲಿ ಸುಮಾರು 48 ಸಾವಿರ ಜೋಳದ ಚೀಲಗಳು(24 ಸಾವಿರ ಕ್ವಿಂಟಾಲ್) ಹುಳ ತುಂಬಿಕೊಂಡು, ಪುಡಿಗಟ್ಟಿರುವುದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ ಉಪಲೋಕಾಯುಕ್ತರು, ಅಧಿಕಾರಿಗಳ ಬೇಜವಾಬ್ದಾರಿತನದಿಂದ ಬಡಜನರು ಸೇವಿಸುವ ಆಹಾರವು ನಷ್ಟಗೊಳ್ಳುತ್ತಿರುವುದಕ್ಕೆ ಸ್ವಯಂ ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಎಂದರು.
ದೂರುಗಳು ಇತ್ಯರ್ಥ: ಇಲ್ಲಿನ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ಸಾರ್ವಜನಿಕರಿಂದ ಆಹವಾಲು ಹಾಗೂ ಕುಂದುಕೊರತೆಗಳ ಸಭೆಯಲ್ಲಿ ವಿವಿಧ ಇಲಾಖೆ ವಿರುದ್ಧ ಸಲ್ಲಿಕೆಯಾಗಿದ್ದ 177 ದೂರು ಪ್ರಕರಣಗಳನ್ನು ವಿಲೇವಾರಿ ಮಾಡಲಾಯಿತು. ಮಹಾನಗರ ಪಾಲಿಕೆಯಲ್ಲಿ 45, ಕಂದಾಯ ಇಲಾಖೆ 44, ಭೂ ದಾಖಲೆಗಳ ಕಚೇರಿಯಲ್ಲಿ 15 ಸೇರಿದಂತೆ ಒಟ್ಟು 177 ದೂರುಗಳ ಇತ್ಯರ್ಥಗೊಂಡಿತು