ಕನಿಷ್ಠ ವೇತನ ಆದೇಶಕ್ಕೆ ಎಪಿಎಂಸಿಯಲ್ಲಿಲ್ಲ ಕಿಮ್ಮತ್ತು

APMC
Published on

ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ಕಾರ್ಯ ನಿರ್ವಹಿಸುತ್ತಿರುವ ತೂಕ ದಾಖಲಾತಿದಾರರಿಗೆ ಕನಿಷ್ಠ ವೇತನ, ಇಎಸ್​ಐ ಮತ್ತು ಪಿಎಫ್ ಸೇರಿ ಮತ್ತಿತರರ ಸೌಲಭ್ಯಗಳು ಇಲ್ಲದೆ ಹಲವು ವರ್ಷಗಳಿಂದ ಜೀತುದಾಳುಗಳಂತೆ ದುಡಿಯುತ್ತಿದ್ದಾರೆ. ಕನಿಷ್ಠ ವೇತನ ಕಾಯ್ದೆ ಅನ್ವಯಿಸಲು ಸರ್ಕಾರ ಹಲವು ಬಾರಿ ಆದೇಶ ಹೊರಡಿಸಿದ್ದರೂ ಪ್ರಯೋಜನವಾಗಿಲ್ಲ. ಈ ಕುರಿತು ತೂಕ ದಾಖಲಾತಿದಾರರು ವಿಜಯವಾಣಿ ಸಹಾಯವಾಣಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದು, ನಮ್ಮ ವರದಿಗಾರ ಬೇಲೂರು ಹರೀಶ್ ಸಿದ್ಧಪಡಿಸಿರುವ ವರದಿ ಇಲ್ಲಿದೆ.

ಬೆಂಗಳೂರು: ಖಾಸಗಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ವಿುಕರಿಗೆ ಕನಿಷ್ಠ ವೇತನ ಕಾಯ್ದೆ ಜಾರಿಗೊಳಿಸಿ ಸರ್ಕಾರ ಆದೇಶಿಸಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ಕೆಲಸ ಮಾಡುತ್ತಿರುವ ತೂಕ ದಾಖಲಾತಿದಾರರಿಗೂ ಈ ಆದೇಶ ಅನ್ವಯವಾಗುತ್ತದೆ. ಆದರೂ, ಅವರಿಗೆ ಹಲವು ವರ್ಷಗಳಿಂದ ಸರಿಯಾಗಿ ವೇತನ ಸಿಗದೆ ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ.

ಸಿಗುವುದು ಕೇವಲ 1-2 ಸಾವಿರ ರೂ.: ರಾಜ್ಯದಲ್ಲಿ 150 ದೊಡ್ಡ ಎಪಿಎಂಸಿಗಳಿವೆ. ಇವುಗಳ ಹೊರತಾಗಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲೂ ಎಪಿಎಂಸಿಗಳಿವೆ. ರೈತರು ತರುವ ಅಲೂಗಡ್ಡೆ, ತೆಂಗಿನಕಾಯಿ, ಮೆಕ್ಕಜೋಳ, ಮೆಣಸಿನಕಾಯಿ ಸೇರಿ ಮತ್ತಿತರರ ಕೃಷಿ ಉತ್ಪನ್ನಗಳನ್ನು ಎಪಿಎಂಸಿಯಲ್ಲಿ ತೂಕ ಮಾಡಿ ಬರೆದುಕೊಳ್ಳುವುದು ಹಾಗೂ ಆಯಾ ದಿನಗಳಲ್ಲಿ ಉತ್ಪನ್ನಗಳ ತೂಕದ ಅಂಕಿ-ಅಂಶಗಳನ್ನು ನೋಂದಣಿ ಮಾಡಿಕೊಂಡು ಎಪಿಎಂಸಿ ಸಮಿತಿಗೆ ವರದಿ ನೀಡುವುದು ತೂಕ ದಾಖಲಾತಿದಾರರ ಕೆಲಸವಾಗಿರುತ್ತದೆ.

ಇವರಿಗೆ 12,500 ರೂ. ವೇತನ ನಿಗದಿಯಾಗಿದೆ. ಆಯಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇವರಿಗೆ ವೇತನ ಪಾವತಿಸ ಬೇಕು. ಆದರೆ, ಕೆಲವು ಕಡೆ ವೇತನ ನೀಡದೆ ನಾಮ್ ಕೇ ವಾಸ್ತೆ ಎಂಬಂತೆ ಸಾವಿರ ಅಥವಾ 2 ಸಾವಿರ ರೂ. ಕೊಟ್ಟು ಕೈತೊಳೆದು ಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಕಡೆ ಕಳೆದ 10 ವರ್ಷಗಳಿಂದ ಸಂಬಳ ಕೊಟ್ಟೇ ಇಲ್ಲ ಎಂದು ಶಿವಮೊಗ್ಗ ಮೂಲದ ತೂಕ ದಾಖಲಾತಿದಾರರೊಬ್ಬರು ನೋವು ಹಂಚಿಕೊಂಡಿದ್ದಾರೆ.

ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ

ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತೂಕ ದಾಖಲಾತಿದಾರರಿಗೆ ಕನಿಷ್ಠ ವೇತನ, ಇಎಸ್​ಐ, ಪಿಎಫ್ ನೀಡಿ ಕಾಯಂಗೊಳಿಸಬೇಕು ಎಂದು ಸಹಕಾರ ಇಲಾಖೆ 2015ರ ಡಿ.14ರಂದು ಆದೇಶ ಹೊರಡಿಸಿದೆ. ಈ ಬಗ್ಗೆ ಕೃಷಿ ಮಾರಾಟ ಇಲಾಖೆಗೆ ಸೂಚನೆ ನೀಡಿದೆ.

ಅಲ್ಲದೆ, ಕನಿಷ್ಠ ವೇತನ ಕಾಯ್ದೆ 1948ರಡಿ ಕಡ್ಡಾಯವಾಗಿ ಕನಿಷ್ಠ ವೇತನ ಪಾವತಿಸುವ ಮನವಿಯನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಸಂಬಂಧಪಟ್ಟವರಿಗೆ ಹಿಂಬರಹ ನೀಡಿ ಅದರ ಪ್ರತಿಯನ್ನು 4 ವಾರಗಳಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಕಾರ್ವಿುಕ ಇಲಾಖೆಯ ಅಧೀನ ಕಾರ್ಯದರ್ಶಿ 2019ರ ಮಾ. 20ರಂದು ಕಾರ್ವಿುಕ ಇಲಾಖೆಯ ಆಯುಕ್ತರಿಗೆ ಸೂಚಿಸಿದೆ.

ಬಳಿಕ ಕಾರ್ವಿುಕ ಇಲಾಖೆ 2019ರ ಜೂ.25ರಂದು ಈ ಕುರಿತು ನಿಯಮಾನುಸಾರವಾಗಿ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಮಾರಾಟ ನಿರ್ದೇಶಕರಿಗೆ ಲಿಖಿತವಾಗಿ ಸೂಚಿಸಿತ್ತು. ಅಲ್ಲದೆ, ಎಪಿಎಂಸಿ ಯಾರ್ಡ್​ನಲ್ಲಿರುವ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗೂ ಈ ಕಾಯ್ದೆ ಅನ್ವಯವಾಗುತ್ತದೆ. ಇಲ್ಲಿನ ಕಾರ್ವಿುಕರಿಗೆ 2003ರಲ್ಲೇ ಕನಿಷ್ಠ ವೇತನ ನಿಗದಿಪಡಿಸಲಾಗಿದೆ. ಈ ಅಧಿಸೂಚನೆ ಪ್ರಕಾರ ಕಾರ್ವಿುಕರು ವೇತನ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ಆದೇಶಿಸಿದ್ದರೂ ಕೃಷಿ ಮಾರಾಟ ಇಲಾಖೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿಯಮದಂತೆ ವೇತನ ನೀಡದೆ ಸತಾಯಿಸುತ್ತಿವೆ.

5 ಲಕ್ಷ ರೂ. ಲಂಚಕ್ಕೆ ಬೇಡಿಕೆ

ಆದೇಶದಂತೆ ವೇತನ ನೀಡುವ ಸಂಬಂಧ ದಾಖಲೆಗಳ ವಿಲೇವಾರಿ ಗಾಗಿ ಇಲಾಖೆಯ ಅಧಿಕಾರಿಗಳು 5 ಲಕ್ಷ ರೂ. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ನಾವು ಬಡವರು, ಕೆಲಸವನ್ನೇ ನಂಬಿಕೊಂಡು ಬದುಕುತ್ತಿದ್ದೇವೆ. ನಮ್ಮ ಬಳಿ ಅಷ್ಟೊಂದು ಹಣ ಇಲ್ಲ ಎಂದು ಪರಿಪರಿಯಾಗಿ ಕೇಳಿಕೊಂಡರೂ ‘ನಾಳೆ ಬಾ...’ ಎಂದು ಹೇಳಿ ಸಾಗಹಾಕುತ್ತಾರೆ. ಕೃಷಿ ಮಾರಾಟ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಕಚೇರಿಗೆ ಪ್ರತಿನಿತ್ಯ ಅಲೆದು ಸಾಕಾಗಿದೆ ಎಂದು ತೂಕ ದಾಖಲಾತಿದಾರರು ಬೇಸರ ವ್ಯಕ್ತಪಡಿಸಿದರು.

ಎಪಿಎಂಸಿಯಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರಗಳು ಅಳವಡಿಸಿಕೊಂಡಿರುವ ಹಿನ್ನೆಲೆಯಲ್ಲಿ ತೂಕ ದಾಖಲಾತಿದಾರರ ಸಂಖ್ಯೆ ಕಡಿಮೆಯಾಗಿದೆ. ಬೆಂಗಳೂರಲ್ಲಿ ಮಾತ್ರ ತೂಕ ಮಾಡುವವರು ಇದ್ದಾರೆ. ಆದರೆ, ಬೇರೆ ಜಿಲ್ಲೆಗಳಲ್ಲಿ ಇಲ್ಲ. ಕನಿಷ್ಠ ವೇತನ ನಿಯಮದಂತೆ ಪ್ರತಿ ತಿಂಗಳು ವೇತನ ನೀಡಲಾಗುತ್ತದೆ. | ಗಿರೀಶ್ ಕೃಷಿ ಮಾರಾಟ ಇಲಾಖೆ (ಆಡಳಿತ) ಹೆಚ್ಚುವರಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net