ವಿಶೇಷ ಕ್ರೀಡಾ ಕಾರ್ಯಯೋಜನೆ ಶೀಘ್ರ ಸಿದ್ದ

mng-aug15-hostel
ಮಂಗಳಾ ಕ್ರೀಡಾಂಗಣದ ಬಳಿ ನಿರ್ಮಿಸಿರುವ ಬಾಲಕಿಯರ ಕ್ರೀಡಾ ವಸತಿ ನಿಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಕ್ರೀಡಾಪಟುಗಳಿಗೆ ಕೋಚಿಂಗ್, ಟ್ರೈನಿಂಗ್ ನೀಡುವುದು ಸಹಿತ ಸೂಕ್ತ ಮಾರ್ಗದರ್ಶನ ನೀಡುವ ಸಂಕಲ್ಪದಿಂದ ವಿಶೇಷ ಕ್ರೀಡಾ ಕಾರ್ಯಯೋಜನೆಯನ್ನು ಜಿಲ್ಲಾಡಳಿತದ ವತಿಯಿಂದ ಶೀಘ್ರದಲ್ಲಿ ಸಿದ್ದಪಡಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಮಂಗಳಾ ಕ್ರೀಡಾಂಗಣದ ಬಳಿ ನಿರ್ಮಿಸಿರುವ ಬಾಲಕಿಯರ ಕ್ರೀಡಾ ವಸತಿ ನಿಲಯವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ಮಾತ್ರ ಎಲ್ಲವನ್ನು ಮಾಡುತ್ತದೆ ಎಂಬ ಮನೋಭಾವ ಹೊರತುಪಡಿಸಿ ಸಾರ್ವಜನಿಕ ನೆಲೆಯಿಂದಲೂ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡುವ ವ್ಯವಸ್ಥೆಯತ್ತ ಆದ್ಯತೆ ನೀಡಬೇಕು. ನಮ್ಮ ಜಿಲ್ಲೆಯಲ್ಲಿ ಯಾವ ಕ್ರೀಡೆಗೆ ಹೆಚ್ಚು ಆದ್ಯತೆ ಇದೆ ಎಂಬುದನ್ನು ಮನಗಂಡು ಆ ಕ್ರೀಡೆಗೆ ಹೆಚ್ಚು ಒತ್ತು ನೀಡಬೇಕಿದೆ. ಇದಕ್ಕಾಗಿ ಪ್ರತ್ಯೇಕ ಕಾರ್ಯಯೋಜನೆ ರೂಪಿಸುವ ಅಗತ್ಯವಿದೆ. ಜಿಲ್ಲಾಧಿಕಾರಿ, ಶಾಸಕರು ಸಹಿತ ಜನಪ್ರತಿನಿಧಿಗಳ ಜತೆಗೆ ಈ ಕುರಿತಂತೆ ವಿಸ್ತೃತ ಚರ್ಚೆ ನಡೆಸಿ ಒಂದೆರಡು ತಿಂಗಳೊಳಗೆ ಅಂತಿಮ ರೂಪುರೇಷೆ ಸಿದ್ದಪಡಿಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಮಾತನಾಡಿ, ಕ್ರೀಡಾ ಯೋಜನೆಗೆ ಮುಖ್ಯ ಅನುದಾನ ನೀಡುವ ಜತೆಗೆ ಆ ವ್ಯವಸ್ಥೆ ನಿರ್ವಹಣೆಗೆ ಹಣ ಮೀಸಲಿಡಬೇಕಿದೆ. ನೆಹರೂ ಮೈದಾನದ ಪಕ್ಕದಲ್ಲಿ ಖಾಲಿ ಇರುವ ಜಾಗದಲ್ಲಿ ಕಬಡ್ಡಿ, ಕುಸ್ತಿ ತರಬೇತಿಗೆ ಮೀಸಲಿಡಬೇಕಿದೆ. ಮಂಗಳಾ ಕ್ರೀಡಾಂಗಣದ ಪ್ರವೇಶ ಪರಿಧಿಯನ್ನು ಅಂಗಡಿ-ವ್ಯವಹಾರಕ್ಕೆ ನೀಡುವ ಮೂಲಕ ಕ್ರೀಡಾಂಗಣ ನಿರ್ವಹಣೆ ಸುಲಭವಾಗಲಿದೆ. ಜತೆಗೆ ಇಲ್ಲಿನ ಸಮಗ್ರ ಅಭಿವೃದ್ದಿಗೆ 3 ಕೋ.ರೂ. ಯೋಜನೆಗೆ ಅನುಮತಿ ಬೇಕಾಗಿದೆ ಎಂದರು.

ವಿ.ಪರಿಷತ್ ಸದಸ್ಯ ಐವನ್ ಡಿಸೋಜ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಕರ್ನಾಟಕ ಗೇರು ಅಭಿವೃದ್ದಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕೆ., ಮನಪಾ ಸದಸ್ಯರಾದ ಸಂಧ್ಯಾ ಮೋಹನ್ ಆಚಾರ್, ಎ.ಸಿ.ವಿನಯ್‌ರಾಜ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್ ಸಿಇಓ ಡಾ.ಆನಂದ್ ಕೆ., ಪ್ರೊಭೆಷನರಿ ಅಧಿಕಾರಿ ಶ್ರವಣ್ ಕುಮಾರ್ ಉಪಸ್ಥಿತರಿದ್ದರು.

ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು.

--------------

ಬೆಂಗ್ರೆಯಲ್ಲಿ ಗಾಲ್ಫ್ ಕೋರ್ಸ್‌ಗೆ ಮೀಸಲಿಟ್ಟ ಜಾಗವನ್ನು ಕ್ರಿಕೆಟ್ ಸ್ಟೇಡಿಯಂಗೆ ಮೀಸಲಿಡಬೇಕು ಹಾಗೂ ಕರಾವಳಿ ಉತ್ಸವ ಮೈದಾನದ ಮೂಲಭೂತ ವ್ಯವಸ್ಥೆ ಸುಧಾರಣೆಗೆ ಆದ್ಯತೆ ನೀಡಬೇಕಿದೆ. ಕ್ರೀಡಾ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ. ಕ್ರೀಡಾಳುಗಳ ಭವಿಷ್ಯಕ್ಕೆ ನಾವು ದಾರಿದೀಪವಾಗಬೇಕು. ಸರಕಾರದ ಜತೆಗೆ ಸಂಘ ಸಂಸ್ಥೆಗಳನ್ನು ಜತೆಯಾಗಿಸಿಕೊಂಡು ವಿಸ್ತೃತವಾದ ಅಭಿವೃದ್ದಿಗೆ ಒತ್ತು ನೀಡಬೇಕಿದೆ.

ಐವನ್ ಡಿಸೋಜ, ವಿಧಾನ ಪರಿಷತ್ ಸದಸ್ಯ

------------------

60 ಬಾಲಕಿಯರಿಗೆ ವಸತಿ ಸೌಲಭ್ಯ

2220 ಚ.ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಕಟ್ಟಡವು 2 ಮಹಡಿಗಳನ್ನು ಒಳಗೊಂಡಿದೆ. 10 ಕೊಠಡಿಗಳು, 10 ಶೌಚಾಲಯ, 10 ಸ್ನಾನಗೃಹವಿದೆ. ಸುಮಾರು 50ರಿಂದ 60 ಬಾಲಕಿಯರಿಗೆ ವಸತಿ ಸೌಲಭ್ಯವನ್ನು ಇಲ್ಲಿ ಒದಗಿಸಬಹುದಾಗಿದೆ. 2018-19ರ ಬಜೆಟ್ ಘೋಷಣೆಯಂತೆ ಬಾಲಕಿಯರ ಕ್ರೀಡಾ ವಸತಿ ನಿಲಯ ಕಟ್ಟಡ ಉದ್ಘಾಟನೆ ಆಗಿದೆ. 2021-22ರಲ್ಲಿ ಅನುದಾನ ಬಿಡುಗಡೆಯಾಗಿದೆ. ನಿರ್ಮಾಣ ವೆಚ್ಚ ಒಟ್ಟು 1.50 ಕೋ.ರೂ. ನಿರ್ಮಿತಿ ಕೇಂದ್ರವು ಇದನ್ನು ನಿರ್ಮಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net