

ಹೊಳೆನರಸೀಪುರ : ಪಟ್ಟಣದ ವಾಸವಾಂಭ ಕೋ ಆಪರೇಟಿವ್ ಬ್ಯಾಂಕಿನಲ್ಲಿ ವಿಶೇಷ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎನ್.ಗೌತಮ್ ಹೇಳಿದರು.
ನಮ್ಮ ಬ್ಯಾಂಕಿನಲ್ಲಿ ಹಿರಿಯ ನಾಗರಿಕರ ವಾಸವಿ ಸಮೃದ್ಧಿ ಠೇವಣಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆ ಅಡಿಯಲ್ಲಿ ಠೇವಣಿಗೆ ಶೇ.9 ಬಡ್ಡಿ ನೀಡಲಾಗುವುದು. ವಾಸವಿ ಬಲ್ಕ್ ಡಿಪಾಸೆಟ್ ಯೋಜನೆ ಅಡಿಯಲ್ಲಿ 399 ದಿನಗಳಿಗೆ 50 ಲಕ್ಷ ರೂ. ನಿಂದ 1 ಕೋಟಿ ರೂ. ಠೇವಣಿ ಇಟ್ಟರೆ ಶೇ.10 ಬಡ್ಡಿ ನೀಡಲಾಗುವುದು. ನಮ್ಮ ಬ್ಯಾಂಕಿನಲ್ಲಿ 10 ವರ್ಷ ಡಿಪಾಸಿಟ್ ಇಟ್ಟರೆ ನಿಮ್ಮ ಠೇವಣಿ ಹಣದಷ್ಟೇ ಬಡ್ಡಿಯನ್ನು ನೀಡಲಾಗುವುದು. ವಾಸವಿ ಅಕ್ಷಯ ಠೇವಣಿ ಯೋಜನೆ ಅಡಿಯಲ್ಲಿ 777 ದಿನಕ್ಕೆ ಠೇವಣಿ ಇಟ್ಟರೆ ಶೇ 7.77, ಹಿರಿಯ ನಾಗರಿಕರಿಗೆ ಶೇ 8.27 ಬಡ್ಡಿ ನೀಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬ್ಯಾಂಕಿನ ಸಿಇಒ ಎಸ್.ಆರ್. ಮೂರ್ತಿ ಮಾತನಾಡಿ, ನಮ್ಮ ಬ್ಯಾಂಕ್ ವಾರ್ಷಿಕ 1927.26 ಕೋಟಿ ರೂ. ವಹಿವಾಟು ನಡೆಸಿದೆ. 119.70 ಕೋಟಿ ರೂ. ಠೇವಣಿ ಹೊಂದಿದ್ದು, 93.56 ಕೋಟಿ ರೂ. ಸಾಲ ನೀಡಿದ್ದೇವೆ. ನಮ್ಮ ಬ್ಯಾಂಕಿನಲ್ಲಿ ಆಧುನಿಕ ಸೌಲಭ್ಯದ ಜತೆಗೆ ಎಟಿಎಂ ಸೇವೆ ಒದಗಿಸಿದ್ದೇವೆ. ತಿಂಗಳಿಗೆ 6 ಸಾವಿರಕ್ಕೂ ಹೆಚ್ಚು ಗ್ರಾಹಕರು ಯುಪಿಐ ಪೇಮೇಂಟ್ ಸೌಲಭ್ಯವನ್ನು ಬಳಸಿಕೊಂಡು ವಹಿವಾಟು ನಡೆಸುತ್ತಿದ್ದಾರೆ ಎಂದರು.
ಉಪಾಧ್ಯಕ್ಷ ಸುಭಾಶ್, ವ್ಯವಸ್ಥಾಪಕ ದಿನೇಶ್, ಮಾಜಿ ಅಧ್ಯಕ್ಷ ಎನ್.ಜಿ.ಮುಕುಂದ, ವಿ.ಎ.ಕಿಶೋರ್, ಸದಸ್ಯರಾದ ರೋಹಿತ್,ಕಿರಣ್, ಸ್ಪಂದನ್ ಭಾಗವಹಿಸಿದ್ದರು.