ಯುವಕರಲ್ಲಿ ದೇಶ ಪ್ರೇಮ ಬೆಳೆಸಲು ವಿಶೇಷ ಕಾರ್ಯಕ್ರಮ

10 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಯುವ ಪೀಳಿಗೆ ಮತ್ತು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ದೇಶಭಕ್ತಿ ಹುಟ್ಟಿಸಲು ಅಖಂಡ ಧಾರವಾಡ ಜಿಲ್ಲೆ, ಸುತ್ತಲಿನ ಸ್ವಾತಂತ್ರ್ಯ ಹೋರಾಟಗಾರರ ಕುರಿತು ವಿಶೇಷ ನೃತ್ಯ ರೂಪಕಗಳನ್ನು ಆ. 15ರಂದು ಜಿಲ್ಲಾ ಕೇಂದ್ರದಲ್ಲಿ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆ, ಕಾಲೇಜುಗಳ ಪ್ರಾಂಶುಪಾಲರ, ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳ ಹಾಗೂ ಬಿಇಒಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಾತಂತ್ರ್ಯೋತ್ಸವವನ್ನು ವಿನೂತನ ಹಾಗೂ ಅರ್ಥಪೂರ್ಣ ಆಚರಿಸಲು ಜಿಲ್ಲೆಯ ಐದಾರು ಹೋರಾಟಗಳ ಸನ್ನಿವೇಶ ಕುರಿತ ನೃತ್ಯ ಹಾಗೂ ದೃಶ್ಯ ರೂಪಕಗಳನ್ನು ಆಯೋಜಿಸಲಾಗುವುದು. ಸ್ಥಳಿಯ ಹೋರಾಟಗಾರರ ಕುರಿತು ಜಾಗೃತಿ ಮೂಡಿಸುವ, ವ್ಯಕ್ತಿ ಹೋರಾಟ ಕುರಿತು ನೃತ್ಯ ಅಥವಾ ದೃಶ್ಯ ರೂಪಕಗಳನ್ನು ತಾಲೂಕುವಾರು ಏರ್ಪಡಿಸಲಾಗುವುದು. ಆಯ್ಕೆಯಾದ ತಂಡಗಳಿಂದ ಜಿಲ್ಲಾ ಕೇಂದ್ರಗಳಲ್ಲಿ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಈ ನಿಟ್ಟಿನಲ್ಲಿ ತಾಲೂಕು ಮಟ್ಟದ ಬಿಇಒಗಳು ಕಾರ್ಯಪ್ರರ್ವತ್ತರಾಗುವಂತೆ ತಿಳಿಸಿದರು.
ಬಾಲಬಳಗ ಶಾಲೆ ಅಧ್ಯಕ್ಪ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಚರಕವು ಅಸ್ತ್ರವಾಗಿದ್ದು, ಅಹಿಂಸೆಯ ಸಂಕೇತವಾಗಿತ್ತು. ಈ ಹಿನ್ನೆಲೆಯಲ್ಲಿ ಬಾಲಬಳಗದ ವಿದ್ಯಾರ್ಥಿಗಳಿಂದ ಚರಕ ನೂಲುವ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದರು.
ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಜಾನಪದ, ರಂಗಕಲಾವಿದರಿದ್ದು, ಚಿಕ್ಕ ಚಿಕ್ಕ ಬರಹಗಳನ್ನು ಬಳಸಿ ಸ್ವಾತಂತ್ರ್ಯ ಚಳುವಳಿ ಬಗ್ಗೆ ರೂಪಕ ಹಮ್ಮಿಕೊಳ್ಳಬಹುದು ಎಂದರು.
ಡಿಡಿಪಿಐ ಎಸ್​.ಎಸ್​.ಕೆಳದಿಮಠ ಮಾತನಾಡಿ, ನರಗುಂದ ಬಂಡಾಯ, ಅದರಗುಂಚಿ ಶಂಕರ ಗೌಡ್ರ, ಅಂದಾನಪ್ಪ ದೊಡ್ಡಮೇಟಿ, ಮೈಲಾರ ಮಹಾದೇವ, ಮುಂಡರಗಿ ಭೀಮರಾಯ ಸೇರಿ ಹಲವರ ಹೋರಾಟದ ಚಳವಳಿ ಆಧಾರಿತ ರೂಪಕ ಏರ್ಪಡಿಸಬಹುದು. ಈ ನಿಟ್ಟಿನಲ್ಲಿ ಶಾಲಾ-ಕಾಲೇಜು, ಕಲಾವಿದರ ಸಭೆಯನ್ನು ಜು. 12ರಂದು ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಲಾಗುವುದು ಎಂದರು.
ಹಿರಿಯ ಕಲಾವಿದರಾದ ಡಾ. ವಿಶ್ವೇಶ್ವರಿ ಹಿರೇಮಠ, ರಂಗಾಯಣ ಕಲಾವಿದ ನದಾಫ ಮಾತನಾಡಿದರು. ಉಪವಿಭಾಗಾಧಿಕಾರಿ ಶಾಲಂ ಹುಸೇನ್​, ಪದವಿ ಪೂರ್ವ ಕಾಲೇಜುಗಳ ಉಪ ನಿರ್ದೇಶಕ ಸುರೇಶ, ಕಲಾವಿದರು, ಸಂ ಸಂಸ್ಥೆಗಳ ಪ್ರತಿನಿಧಿಗಳು, ಬಿಇಒಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net