

ಮೈಸೂರು: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಶಕ್ತಿಧಾಮ ವಿದ್ಯಾಶಾಲೆಯಲ್ಲಿ ಬುಧವಾರ ವಿಕಸಿತ ಭಾರತಕ್ಕಾಗಿ ಸ್ಥಳೀಯ ತಂತ್ರಜ್ಞಾನಗಳು ಎಂಬ ಧೈಯ ವಾಕ್ಯದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜೆ.ಎಸ್.ಎಸ್. ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಪ್ರಸನ್ನ ಸಂತೆಕಡೂರು ಅವರು ಸಮತೋಲನ ಆಹಾರದ ಬಗ್ಗೆ ತಿಳಿವಳಿಕೆ ನೀಡಿದರಲ್ಲದೇ ಕೃತಕ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ, ದೈಹಿಕ ಶ್ರಮ ಇಲ್ಲದಿರುವುದರಿಂದ ಮನುಷ್ಯನ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ವಿವರಿಸಿದರು.
ಸಿ.ವಿ.ರಾಮನ್ ಹಾಗೂ ವಿಜ್ಞಾನ ವಿಷಯಗಳ ಬಗ್ಗೆ ಮಕ್ಕಳಿಗೆ ರಸಪ್ರಶ್ನೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಾಮನ್ ಪರಿಣಾಮ, ವಿಜ್ಞಾನ ದಿನದ ಥೀಮ್, ಸಮತೋಲನ ಆಹಾರ ಇತ್ಯಾದಿ ವಿಷಯಗಳ ಬಗ್ಗೆ ಶಿಕ್ಷಕಿಯರು ಮಕ್ಕಳಿಗೆ ವಿವರಣೆ ನೀಡಿದರು.
ಶಕ್ತಿಧಾಮದ ಮ್ಯಾನೇಜಿಂಗ್ ಟ್ರಸ್ಟಿ ಸದಾನಂದ, ಧರ್ಮದರ್ಶಿಗಳಾದ ಕೋಮಲ, ಚೇತನ್, ಮಂಜುಳಾ ಇತರರು ಭಾಗವಹಿಸಿದ್ದರು. ವಿದ್ಯಾರ್ಥಿನಿ ನೇತ್ರಾವತಿ ರಾಮನ್ ವೇಷ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿ ರಾಮನ್ ಬಗ್ಗೆ ಮಾತನಾಡಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿನಿಯಾದ ಸಂಗೀತ ಕಾರ್ಯಕ್ರಮ ನಿರೂಪಿಸಿದರು. ಕಲ್ಪನಾ ವಂದಿಸಿದರು.