

ಮಡಿಕೇರಿ:
ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಶನ್ ಕೊಡಗು ಶಾಖೆ ವತಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರ ಅನುಷ್ಠಾನದ ಕುರಿತು ಸೋಮವಾರ (ಅ.೯) ಮಡಿಕೇರಿಯಲ್ಲಿ ಶಿಕ್ಷಣ ತಜ್ಞರ ವಿಶೇಷ ಸಭೆ ನಡೆಯಲಿದೆ ಎಂದು ಸಂಸ್ಥೆಯ ಕೊಡಗು ಜಿಲ್ಲಾ ಸಂಚಾಲಕ ಜಯಪ್ರಕಾಶ್ ಎಸ್.ತಂಟೆಪಾಡಿ ತಿಳಿಸಿದ್ದಾರೆ.
ಅಂದು ಬೆಳಗ್ಗೆ ೧೦.೩೦ಕ್ಕೆ ನಗರದ ಕಾವೇರಿ ಹಾಲ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಪೊನ್ನಂಪೇಟೆ ಸಾಯಿಶಂಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೋಳೆರ ಝರು ಗಣಪತಿ ವಹಿಸಲಿದ್ದಾರೆ. ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಖಾತೆ ಮಾಜಿ ಸಚಿವ ಬಿ.ಸಿ. ನಾಗೇಶ್, ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಪಿ.ಸುಬ್ರಮಣ್ಯ ಯಡಿಪಡಿತ್ತಾಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಹಾಲಿ ಹಾಗೂ ಮಾಜಿ ಶಾಸಕರು, ವಿಶ್ರಾಂತ ಕುಲಪತಿಗಳು, ಹಾಲಿ, ಮಾಜಿ ಅಕಾಡೆಮಿಕ್ ಕೌನ್ಸಿಲ್, ಸಿಂಡಿಕೇಟ್ ಸದಸ್ಯರು, ಶಿಕ್ಷಣ ತಜ್ಞರು, ಪ್ರಾಂಶುಪಾಲರು, ಉಪನ್ಯಾಸಕರು, ಮುಖ್ಯೋಪಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು, ಆಡಳಿತ ಮಂಡಳಿ, ಬರಹಗಾರರು, ಅಂಕಣಕಾರರು, ಸಾಹಿತಿಗಳು ಹಾಗೂ ಚಿಂತಕರು ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರು ವಿಶ್ವ ವಿದ್ಯಾನಿಲಯದ ನಿಕಟಪೂರ್ವ ಸಿಂಡಿಕೇಟ್ ಸದಸ್ಯ ಹಾಗೂ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್ ನ ಮಂಗಳೂರು ವಿಭಾಗದ ಸಂಚಾಲಕ ಕೆ.ರಮೇಶ್ ಮಾತನಾಡಿ, ದೇಶದಲ್ಲಿ ಮೊದಲ ಬಾರಿಗೆ ೨೦೨೦-೨೧ರಲ್ಲಿ ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗಿದೆ. ಆದರೆ ಇಂತಹ ಶಿಕ್ಷಣ ನೀತಿಯನ್ನು ರದ್ದುಗೊಳಿಸಲು ಹೊರಟಿರುವ ಸರ್ಕಾರದ ನಿರ್ಧಾರ ಪೂರ್ವಾಗ್ರಹವಾಗಿದೆ ಎಂದು ಆರೋಪಿಸಿದರು.
ಸಭೆಯಲ್ಲಿ ಶಿಕ್ಷಣ ನೀತಿಯ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಯಲಿದ್ದು, ಎನ್‌ಇಪಿಯನ್ನು ರದ್ದುಪಡಿಸುವ ನಿರ್ಧಾರವನ್ನು ಖಂಡಿಸಿ ಮತ್ತು ಇದರ ಪರಿಣಾಮವನ್ನು ಅವಲೋಕಿಸಲು ಶಿಕ್ಷಣ ತಜ್ಞರ ವಿಶೇಷ ಸಭೆಯನ್ನು ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮದೆನಾಡು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಅಗೋಳಿಕಜೆ ಇದ್ದರು.