

ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣದ ವಿಚಾರಣೆಗೆ ರಾಜ್ಯ ಸರ್ಕಾರ ವಿಶೇಷ ತ್ವರಿತ ನ್ಯಾಯಾಲಯ ಸ್ಥಾಪನೆಗೆ ನಿರ್ಧರಿಸಿದೆ. ಆ ಕುರಿತು ಶೀಘ್ರವೇ ಹೈಕೋರ್ಟ್‌ಗೆ ಪತ್ರ ಸಲ್ಲಿಸಲಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಬಿಡ್ನಾಳದಲ್ಲಿರುವ ನೇಹಾ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಕರಣವನ್ನು ಈಗಾಗಲೇ ಸಿಐಡಿಗೆ ಒಪ್ಪಿಸಿದ್ದು, ತನಿಖೆ ಆರಂಭವಾಗುತ್ತಿದೆ. ಆದಷ್ಟು ಬೇಗ ತಪ್ಪಿತಸ್ಥರಿಗೆ ಶಿಕ್ಷೆಯಾಗಿ, ನ್ಯಾಯ ಸಿಗಲಿದೆ. ರಾಜ್ಯದ ಜನತೆಯ ಭಾವನೆಗೆ ಸರ್ಕಾರ ಸ್ಪಂದಿಸುತ್ತಿದೆ ಎಂದರು.
ಅನಿವಾರ್ಯ ಕಾರಣದಿಂದ ನಿರಂಜನ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ನೀಡಲು ಆಗಿರಲಿಲ್ಲ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಿರಂಜನ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿ, ಸಾಂತ್ವನ ಹೇಳಿದ್ದಾರೆ. ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಸ್ವತಃ ಅವರೇ ವಿವರಿಸಿದ್ದಾರೆ ಎಂದರು.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವರು ಹೇಳಿದ ಹೇಳಿಕೆ ಮುಗಿದ ಅಧ್ಯಾಯ. ಈಗಾಗಲೇ ಅದನ್ನು ಸರಿಪಡಿಸಲಾಗಿದೆ. ಗೃಹ ಸಚಿವರು ಸಹ ಆ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಸಚಿವ ಪಾಟೀಲ ಹೇಳಿದರು.