

ಗುಳೇದಗುಡ್ಡ: ಗೌರಿಹುಣ್ಣಿಮೆ ಹೆಂಗಳೆಯರ ಹಬ್ಬ. ಹೊತ್ತು ಮುಳುಗಿ ದೀಪ ಹಚ್ಚಿದ ಮೇಲೆ ಹೆಂಗಳೆಯರು ಆರತಿ ತಟ್ಟೆ ಹಿಡಿದುಕೊಂಡು ಅದರಲ್ಲಿ ಚಂದದ ಸಕ್ಕರೆ ಗೊಂಬೆಗಳನ್ನು ಇಟ್ಟುಕೊಂಡು ಕೋಲು…ಕೋಲೆನ್ನ ಎನ್ನುತ್ತ ಗೌರಿದೇವಿ ಪ್ರತಿಷ್ಠಾಪಿಸಿದ ಮನೆಗೆ ಹೋಗಿ ಆರತಿ ಬೆಳಗಿ, ಹಾಡು ಹಾಡುವುದು ಹಬ್ಬದ ಸಂಪ್ರದಾಯ.
ಗೌರಿಯನ್ನು ಪ್ರತಿಷ್ಠಾಪಿಸುವ ಅಪರೂಪದ ಮಂಟಪ ಪಟ್ಟಣದ ಹೊಸಪೇಟೆ ಓಣಿಯ ವೀರಸಂಗಪ್ಪ ಈಶ್ವರಪ್ಪ ಭಾವಿ ಅವರ ಮನೆಯಲ್ಲಿದೆ. ಸಾಗವಾನಿ ಕಟ್ಟಿಗೆಯಿಂದ ನಿರ್ಮಾಣಗೊಂಡ ಗೌರಿಮಂಟಪ ನೂರಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದು ಎನ್ನುವುದು ವಿಶೇಷ.
ಈ ಮಂಟಪ ಮೂರು ಅಂತಸ್ತುಗಳನ್ನು ಒಳಗೊಂಡಿದೆ. ಮೊದಲನೇ ಅಂತಸ್ತು ಮೆಟ್ಟಿಲುಗಳ ಆಕಾರ ಹೊಂದಿದ್ದು, ಈ ಮೆಟ್ಟಿಲುಗಳ ಮೇಲೆ ಅಪರೂಪದ ಗಾಜಿನ ಪೇಂಟಿಂಗಳನ್ನು ಅಳವಡಿಸಲಾಗಿದೆ. ವಿಷ್ಣು, ಆಂಜನೇಯ, ಗರುಡ, ವೀರಭದ್ರ, ಆದಿಶೇಷ, ನರಸಿಂಹ ದೇವರ ಕಟ್ಟಿಗೆ ಗೊಂಬೆಗಳನ್ನು ಜೋಡಿಸಲಾಗಿದೆ. ಎರಡನೇ ಅಂತಸ್ತು ಮೂರು ಮಂಟಪಗಳನ್ನು ಒಳಗೊಂಡಿದ್ದು, ನಡುವಿನ ಮಂಟಪದಲ್ಲಿ ಶಿವನ ತೊಡೆ ಮೇಲೆ ಗೌರಿ ಕುಳಿತ ಚಂದದ ಬೊಂಬೆ ಇದೆ. ಶಿವ ಪಾರ್ವತಿಯರ ಕೆಳಗೆ ಅವರ ಹನ್ನೊಂದು ಮಕ್ಕಳ ಪ್ರತಿಕೃತಿ ಜೋಡಿಸಲಾಗಿದೆ. ಅಕ್ಕಪಕ್ಕದ ಮಂಟಪಗಳಲ್ಲಿ ಲಕ್ಷ್ಮೀ ಹಾಗೂ ಸರಸ್ವತಿಯ ಗೊಂಬೆಗಳಿವೆ.
ಮೂರನೇ ಅಂತಸ್ತು ಮಹಲು ಎಂದು ಕರೆಯಲಾಗುತ್ತಿದೆ. ಇಲ್ಲಿ ದೇವರ ಚಿತ್ರಪಟಗಳು, ಶಂಖ, ಚಕ್ರಗಳ ರಚನೆಗಳನ್ನು ಹೊಂದಿದ ವಿವಿಧ ಬಣ್ಣ ಬಣ್ಣದ ಹರಳುಗಳಿಂದ ವಿನ್ಯಾಸ ಮಾಡಿದ ಆಕರ್ಷಕ ಚೌಕಾಕೃತಿಗಳು, ಕನ್ನಡಿಗಳನ್ನು ಜೋಡಿಸಿಡಲಾಗಿದೆ. ಇಡೀ ಮಂಟಪವನ್ನು ಬಂಗಾರದಂತೆ ಮಿಂಚುವ ಬಣ್ಣದ (ಬ್ಯಾಗಡಿ) ಹಾಳೆ, ಗಾಜಿನ ಚೂರುಗಳು, ಬಣ್ಣದ ಹರಳುಗಳು ಹಾಗೂ ಬೋರಂಗಿಯ ರೆಕ್ಕೆಗ ಳಿಂದ ಅಲಂಕರಿಸಲಾಗಿದೆ. ವಿದ್ಯುತ್ ಬೆಳಕಿನಲ್ಲಿ ಇಡೀ ಮಂಟಪ ಝಗಮಗಿಸುತ್ತದೆ. ಕಮಾನು, ಅಡ್ಡಪಟ್ಟಿಗಳಲ್ಲಿ ಕೆತ್ತಿರುವ ಬಳ್ಳಿ, ಚಕ್ರ, ನವಿಲು, ಗಿಳಿಯ ಚಿತ್ತಾರಗಳು ಮಂಟಪದ ಸೊಬಗು ಹೆಚ್ಚಿಸಿವೆ.
ಗುಳೇದಗುಡ್ಡದ ಹೊಸಪೇಟೆ ಓಣಿಯ ವೀರಸಂಗಪ್ಪ ಈಶ್ವರಪ್ಪ ಭಾವಿ ಅವರ ಮನೆಯಲ್ಲಿ ಗೌರಿ ಹುಣ್ಣಿಮೆಯ 2-3ದಿನ ಮೊದಲು ಈ ಅಪರೂಪದ ಮಂಟಪವನ್ನು ಜೋಡಿಸಿ ಪ್ರದರ್ಶಿಸಲಾಗುತ್ತದೆ. ಈ ಮಂಟಪ ಪ್ರದರ್ಶನಕ್ಕೆ ಅನುಕೂಲವಾಗುಂತೆ ಹಿರಿಯರು ಮನೆಯ ವಠಾರ ನಿರ್ಮಿಸಿದ್ದಾರೆ. ಈಗ ವೀರಸಂಗಪ್ಪ ಅವರು ಈ ಮಂಟಪದ ನಿರ್ವಹಣೆ ಮಾಡುತ್ತಿದ್ದಾರೆ. ಮಂಟಪ ಜೋಡಣೆ, ನಿರ್ವಹಣೆಗೆ ಸಾಕಷ್ಟು ಖರ್ಚು ವೆಚ್ಚಗಳಿದ್ದರೂ ಹಿರಿಯರು ಹಾಕಿರುವ ಸಂಪ್ರದಾಯ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಪ್ರಸಕ್ತ ವರ್ಷ ನ.28 ರವರೆಗೆ ಭಾವಿಯವರ ಮನೆಯಲ್ಲಿ ಆಕರ್ಷಕ ಮಂಟಪ ನೋಡಲು ಅವಕಾಶವಿದೆ.