ಕರೊನಾ ಸೇನಾನಿಗಳಿಗೆ ವಿಶೇಷ ಆ್ಯಪ್, ಜಿಲ್ಲಾಧಿಕಾರಿ ರವೀಂದ್ರ ಮಾಹಿತಿ, ಆಸ್ಪತ್ರೆಗೆ ತೆರಳುವವರು ಆಭರಣ ಧರಿಸದಿರಿ

oct 20 dhl DC Visit news ph-1.A
Published on

ದೇವನಹಳ್ಳಿ: ಕರೊನಾ ಸೇನಾನಿಗಳ ಕಾರ್ಯಪಡೆಯನ್ನು ಮತ್ತಷ್ಟು ಬಲಪಡಿಸಲು ಅವರಿಗಾಗಿ ವಿಶೇಷ ಆ್ಯಪ್ ರೂಪಿಸಲಾಗಿದೆ. ಅದರ ಮೂಲಕ ಸೋಂಕಿತರು, ಅವರ ಪ್ರಾಥಮಿಕ ಸಂಪರ್ಕಿತರು ಹಾಗೂ ಹೋಂ ಐಸೋಲೇಷನ್‌ನಲ್ಲಿ ಇರುವವರ ಬಗ್ಗೆ ವಿವರ ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಎ. ರವೀಂದ್ರ ತಿಳಿಸಿದರು.

ದೇವನಹಳ್ಳಿಯ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹೋಂ ಐಸೋಲೇಷನ್‌ಲ್ಲಿ ಇರುವವರು, ಪ್ರಾಥಮಿಕ ಸಂಪರ್ಕಿತರ ಬಗ್ಗೆ ನರ್ಸಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಂದ ಮಾಹಿತಿ ಪಡೆದುಕೊಂಡು ಮಾತನಾಡಿದರು. ದೇವನಹಳ್ಳಿಯಲ್ಲಿ 109 ಜನ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಆಕಾಶ್ ಆಸ್ಪತ್ರೆಯಲ್ಲಿ ದೇವನಹಳ್ಳಿ ತಾಲೂಕಿನ 419 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಆಸ್ಪತ್ರೆಗೆ ಹೋಗುವ ಮುನ್ನ ರೋಗಿಗಳು ಮತ್ತು ಪಾಲಕರು ಎಚ್ಚರ ವಹಿಸಿ ಆಭರಣಗಳು ಮತ್ತಿತರ ಯಾವುದೇ ಬೆಲೆಬಾಳುವ ವಸ್ತುಗಳನ್ನು ಧರಿಸಿರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹಾಕಿಕೊಂಡಿದ್ದರೆ, ಆಸ್ಪತ್ರೆಯವರಿಗೆ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಕಳೆದ 15 ದಿನಗಳಲ್ಲಿ ಸಾವಿನ ಪ್ರಮಾಣ ಶೇ.0.5ಕ್ಕೆ ಇಳಿಕೆಯಾಗಿದ್ದು, ಶೇ.2 ಇದೆ. 7 ದಿನಗಳಲ್ಲಿ ಸೋಂಕಿತರ ಪ್ರಮಾಣ ಶೇ.11.4 ಇದೆ. ಕಳೆದ 7 ದಿನಗಳಲ್ಲಿ ಶೇ.98.8 ಟೆಸ್ಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಹೋಂ ಐಸೋಲೇಷನ್ ಮತ್ತಷ್ಟು ಸುಧಾರಣೆ ಮಾಡಬೇಕು. ಲೋಪದೋಷಗಳಿದ್ದರೆ ಸರಿಪಡಿಸಬೇಕು ಎಂಬ ಕಾರಣಕ್ಕಾಗಿ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದಾಗಿ ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಮತ್ತು ಪುರಸಭೆ ಸಿಬ್ಬಂದಿ ಅಲ್ಪಕಾಲದಲ್ಲೇ ಆ್ಯಪ್ ಬಗ್ಗೆ ಚೆನ್ನಾಗಿ ತಿಳಿದುಕೊಂಡು ತಮ್ಮ ವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ಸಹ ತಪಾಸಣೆ ಮಾಡಿಸಿಕೊಂಡು ಸಹಕರಿಸಿದರೆ ಕರೊನಾ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಜುಳಾ, ತಾಲೂಕು ಆರೋಗ್ಯಾಧಿಕಾರಿ ಡಾ. ಪಿ.ಕೆ. ಸಂಜಯ್, ಸಮುದಾಯ ಅಭಿವೃದ್ದಿ ಅಧಿಕಾರಿ ಬೈರಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net