

ಬೀರೂರು: ಮಹರ್ಷಿ ವಾಲ್ಮೀಕಿ ಕವಿಕುಲದ ಗುರುವಾಗಿ ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ವಾಲ್ಮೀಕಿ ರಚಿತ ರಾಮಾಯಣ ಭಾರತೀಯ ಸಂಸ್ಕೃತಿಯ ತಳಹದಿ ಎಂದು ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿಮನೆ ಹೇಳಿದರು.
ಪುರಸಭೆಯಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ವಾಲ್ಮೀಕಿ ಒಬ್ಬ ವ್ಯಕ್ತಿಯಲ್ಲ, ಅವರೊಂದು ಶಕ್ತಿ. ಅವರ ಜ್ಞಾನ, ಚಿಂತನೆ ಅನುಕರಣೀಯ. ರಾಮಾಯಣದ 24 ಸಾವಿರ ಶ್ಲೋಕಗಳು ಸಮಾಜಕ್ಕೆ ಮಾನವೀಯ ಮೌಲ್ಯ ಬೋಧಿಸುತ್ತದೆ. ಜಗತ್ತಿಗೆ ಜ್ಞಾನ ಭಂಡಾರವನ್ನು ನೀಡಿದೆ. ರಾಮಾಯಣ ಕೃತಿ ಕೌಟುಂಬಿಕ ಸಾಮರಸ್ಯದ ಸಂದೇಶವನ್ನೂ ನೀಡುತ್ತಿದೆ ಎಂದರು.
ಅಂದು ಸಮಾಜದಲ್ಲಿ ಶ್ರೀರಾಮನಂಥ ಪುತ್ರ, ಸೀತೆಯಂಥ ಪತ್ನಿ, ಭರತ, ಲಕ್ಷ್ಮಣರಂಥ ಸಹೋದರರು ಇರಬೇಕು ಎನ್ನುವುದು ಎಲ್ಲರ ಅಭಿಲಾಷೆಯಾಗಿರುತ್ತಿತ್ತು. ಇಂದು ಅವಿಭಕ್ತ ಕುಟುಂಬ ಪದ್ಧತಿ, ಸಹೋದರತ್ವ, ಪಿತೃವಾಕ್ಯ ಪರಿಪಾಲನೆ, ಮಾತೃಪ್ರೇಮ ಮರೆಯಾಗಿ ವೃದ್ಧಾಶ್ರಮ ಪದ್ಧತಿ ಹೆಚ್ಚುತ್ತಿದೆ. ರಾಮಾಯಣವನ್ನು ಓದಿದವರು ಮತ್ತು ಅನುಸರಿಸಿದವರು ಎಂದಿಗೂ ಕೌಟುಂಬಿಕ ಮೌಲ್ಯಗಳಿಗೆ ಬದ್ಧರಾಗಿಯೇ ಇರುತ್ತಾರೆ. ಇದು ನಮ್ಮ ದೇಶದ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಹೇಳಿದರು.
ಪುರಸಭೆ ಸದಸ್ಯ ಬಿ.ಆರ್.ಮೋಹನ್‌ಕುಮಾರ್ ಮಾತನಾಡಿ, ದೇಶದ ಎಲ್ಲ ಭಾಷೆಗಳಲ್ಲಿ ಸಾಹಿತಿಗಳು ವಾಲ್ಮೀಕಿ ರಾಮಾಯಣವನ್ನು ಆಧರಿಸಿ ರಾಮಾಯಣ ರಚಿಸಿದ್ದಾರೆ. ಕವಿಗಳಿಗೆ ವಾಲ್ಮೀಕಿ ಗುರುವಾಗಿದ್ದಾರೆ ಎಂದರು.
ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಸದಸ್ಯೆ ಸಹನಾ, ಜ್ಯೋತಿ, ಭಾಗ್ಯಲಕ್ಷ್ಮೀ, ಹಿರಿಯ ಆರೋಗ್ಯ ಅಧಿಕಾರಿ ಲಕ್ಷ್ಮಣ್ ಮಾತನಾಡಿದರು. ಸದಸ್ಯ ಲೋಕೇಶಪ್ಪ, ಮುಖಂಡರಾದ ಮಧು ಬಾವಿಮನೆ, ರವಿ, ಬಿ.ಎಂ.ರುದ್ರಪ್ಪ, ಮೋಹನ್‌ಕುಮಾರ್, ವೆಂಕಟೇಶ್, ಕೃಷ್ಣಮೂರ್ತಿ ಹಾಗೂ ಪುರಸಭೆ ಸಿಬ್ಬಂದಿ ಇದ್ದರು.