ಕಷ್ಟಪಟ್ಟು ಓದಿಸಿದ ತಂದೆಯನ್ನೇ ಮರೆತು, ಮನೆಗೆ ಆಧಾರವಾಗದೇ ಐಶಾರಾಮಿ ಜೀವನ ನಡೆಸುತ್ತಿದ್ದ ಮಗನಿಗೆ ಚಾಟಿ

Court 20 dec 19
Published on

ರಾಯಚೂರು: ಕಷ್ಟಪಟ್ಟು ಓದಿಸಿದ ತಂದೆಯನ್ನೇ ಮರೆತು, ಮನೆಗೆ ಆಧಾರವಾಗದೇ ಐಶಾರಾಮಿ ಜೀವನ ನಡೆಸುತ್ತಿದ್ದ ಮಗನಿಗೆ ನ್ಯಾಯಮಂಡಳಿ ಚಾಟಿಯೇಟು ಬೀಸಿದ್ದು, ಅಪ್ಪನಿಗೆ ಜೀವನಾಂಶ ನೀಡುವಂತೆ ಆದೇಶಿಸಿದೆ!

ನಗರದ ನಿವಾಸಿಯೊಬ್ಬರು ಕೂಲಿ ಕೆಲಸ ಮಾಡಿ ಐವರು ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದು, ಇವರಲ್ಲಿ ನಾಲ್ವರು ಇನ್ನೂ ಓದುತ್ತಿದ್ದಾರೆ. ಹಿರಿಯ ಮಗ ಮಾತ್ರ ಓದು ಮುಗಿಸಿದ್ದು, ಖಾಸಗಿ ಮೊಬೈಲ್ ಕಂಪನಿಯಲ್ಲಿ ನೆಟ್​ವರ್ಕ್ ಇಂಜಿನಿಯರ್ ಆಗಿದ್ದಾನೆ. ತಿಂಗಳಿಗೆ 43 ಸಾವಿರ ರೂ. ಸಂಬಳ ಬರುತ್ತಿದ್ದರೂ ಕುಟುಂಬಕ್ಕೆ ನೆರವಾಗುತ್ತಿರಲಿಲ್ಲ. ಹೋಟೆಲ್​ನಲ್ಲೆ ಊಟ, ಲಾಡ್ಜ್​ನಲ್ಲಿ ವಾಸ ಮಾಡುತ್ತಾ ಮನೆಗೆ ಬರುವುದನ್ನೆ ಕಡಿಮೆ ಮಾಡಿದ್ದ. ಇದರಿಂದ ಮನೆ ಪರಿಸ್ಥಿತಿ ಕಷ್ಟವಾಗಿದ್ದು, ಬೇಸತ್ತ ತಂದೆ, ಮಗನ ವಿರುದ್ಧ ‘ಪಾಲಕರ ಪೋಷಣೆ, ಸಂರಕ್ಷಣೆ, ಹಿರಿಯ ನಾಗರಿಕರ ರಕ್ಷಣಾ ನ್ಯಾಯ ಮಂಡಳಿ’ಗೆ ದೂರು ನೀಡಿದ್ದರು.

ವಾದವಿವಾದ ಪರಿಶೀಲಿಸಿದ ಮಂಡಳಿ ಹಾಗೂ ರಾಯಚೂರು ಉಪವಿಭಾಗದ ಉಪವಿಭಾಗಾಧಿಕಾರಿ ಸಂತೋಷ ಎಸ್ ಕಾಮಗೌಡರು ‘ಪ್ರತಿ ತಿಂಗಳು 10ನೇ ತಾರೀಕಿನೊಳಗೆ ಆರ್​ಟಿಜಿಎಎಸ್ ಮೂಲಕ 20 ಸಾವಿರ ರೂ. ತಂದೆ ಬ್ಯಾಂಕ್​ಖಾತೆಗೆ ಜಮಾ ಮಾಡಬೇಕು. ತಿಂಗಳಿಗೆ ಒಮ್ಮೆ ಪಾಲಕರನ್ನು ಭೇಟಿ ಮಾಡಿ, ಯೋಗಕ್ಷೇಮ ವಿಚಾರಿಸಬೇಕು. ಭಾನುವಾರದಂದು ದೂರವಾಣಿ ಮೂಲಕ ಪಾಲಕರ ಆರೋಗ್ಯ ವಿಚಾರಿಸಬೇಕು’ ಎಂದು ಆದೇಶಿಸಿದೆ.

ವಾಸ್ತವ ಆಧಾರದ ಮೇಲೆ ಈ ಆದೇಶ ನೀಡಲಾಗಿದೆ. ಮಕ್ಕಳು ಪಾಲಕರನ್ನು ಕಡೆಗಣಿಸುವಂತಿಲ್ಲ, ಮಾನವೀಯತೆ ಮರೆಯಕೂಡದು ಎನ್ನುವುದನ್ನು ತಿಳಿ ಹೇಳಿ, ಕಾಯ್ದೆ ಅನ್ವಯ ಕ್ರಮ ವಹಿಸಲಾಗಿದೆ. | ಸಂತೋಷ ಎಸ್.ಕಾಮಗೌಡ ಉಪ ವಿಭಾಗ ಅಧಿಕಾರಿ, ರಾಯಚೂರು

ಏನಿದು ನ್ಯಾಯಮಂಡಳಿ?

ಕುಟುಂಬದಲ್ಲಿ ಹಿರಿಯರಿಗೆ ಅಥವಾ ಪಾಲಕರ ಹೆಸರಿನ ಆಸ್ತಿ ಅಥವಾ ಅನಾರೋಗ್ಯ ಪೀಡಿತರಾದಾಗ ಸರಿಯಾಗಿ ನೋಡಿಕೊಳ್ಳದ ಮಕ್ಕಳ ಬಗ್ಗೆ ವಿವರವಾದ ಮಾಹಿತಿಯೊಂದಿಗೆ ಅಸಹಾಯಕರು, ಆಯಾ ಉಪ ವಿಭಾಗ (ಎಸಿ) ಕಚೇರಿ ಅಥವಾ ಎಸ್ಪಿ ಕಚೇರಿ ಆವರಣದಲ್ಲಿರುವ ಹಿರಿಯ ನಾಗರಿಕರ, ಪೋಷಕರ ಸಾಂತ್ವನ ಕೇಂದ್ರದಲ್ಲಿ ವಿಳಾಸ ಸಮೇತ ದೂರರ್ಜಿ ದಾಖಲಿಸಬೇಕು. ಕೇಂದ್ರದಲ್ಲಿ ಕೌನ್ಸೆಲಿಂಗ್ ಮಾಡಿದಾಗ ಪ್ರಕರಣ ಸುಖಾಂತ್ಯ ಆಗದಿದ್ದರೆ, ಅಂತಹ ಪ್ರಕರಣಗಳನ್ನು ಎಸಿ ಅಧ್ಯಕ್ಷತೆಯಲ್ಲಿನ ನ್ಯಾಯ ಮಂಡಳಿಗೆ ವರ್ಗಾಯಿಸಲಾಗುತ್ತದೆ. ಸಲ್ಲಿಕೆಯಾದ ಅರ್ಜಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ವಾಸ್ತವ ಅರಿತ ನಂತರ ಪುನಃ ಸಂಧಾನ ಮಾಡಲಾಗುತ್ತದೆ. ಯಶಸ್ವಿಯಾಗದಿದ್ದಾಗ ಮಕ್ಕಳು ನೌಕರರಾಗಿದ್ದರೆ, ಶಕ್ತರಾಗಿದ್ದರೆ ಅವರ ಹೆಸರಿನ ಆಸ್ತಿಯನ್ನು ಪುನಃ ಪಾಲಕರ ಜೀವಿತಾವಧಿ ವರೆಗೂ ವರ್ಗಾವಣೆ ಅಥವಾ ಮಾರಾಟ ಆಗದಂತೆ ಆದೇಶಿಸಲ್ಪಡುತ್ತದೆ. ಆದೇಶದ ನಂತರವೂ ಪೋಷಣೆ, ಪಾಲನೆ ಮಾಡದ ಸಂದರ್ಭದಲ್ಲಿ ಕ್ರಮಕ್ಕೂ ಮಂಡಳಿಗೆ ಅಧಿಕಾರ ಇರಲಿದೆ.

| ವೆಂಕಟೇಶ್ ಹೂಗಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net