ಚರ್ಚೆಯಿಂದಲೇ ಕಾವೇರಿ ಜಲ ವಿವಾದಕ್ಕೆ ಪರಿಹಾರ

mysore
Published on

ಮೈಸೂರು: ಕಾವೇರಿ ಜಲ ವಿವಾದವನ್ನು ನ್ಯಾಯಾಲಯದಿಂದ ಸರಿಪಡಿಸಲಾಗದು. ಕರ್ನಾಟಕ, ತಮಿಳುನಾಡು ರಾಜ್ಯಗಳ ರೈತರು ಕುಳಿತು ಚರ್ಚಿಸುವುದು ಅಗತ್ಯ ಎಂದು ಮದರಾಸು ಅಭಿವೃದ್ಧಿ ಅಧ್ಯಯನ ಸಂಸ್ಥೆ ಮಾಜಿ ನಿರ್ದೇಶಕ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ವಿ.ಕೆ. ನಟರಾಜ್ ಹೇಳಿದರು.


ಅಭಿರುಚಿ ಪ್ರಕಾಶನದ ವತಿಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಸಿ.ಚಂದ್ರಶೇಖರ್ ಅವರ ‘ಕಾವೇರಿ ವಿವಾದ; ಒಂದು ಐತಿಹಾಸಿಕ ಹಿನ್ನೋಟ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕಾವೇರಿ ಜಲ ವಿವಾದದ ಕುರಿತು ಇತಿಹಾಸದ ತಪ್ಪುಗಳನ್ನು ತಿದ್ದುವವರು ಯಾರು? ತಪ್ಪಿಗೆ ಯಾರು ಕ್ಷಮೆ ಕೇಳಬೇಕು? ಮುಂದೆ ಏನು ಪ್ರಶ್ನೆ ಬರುತ್ತದೆ. ಆ ಬಗ್ಗೆ ಆಲೋಚಿಸುವುದು ಮುಖ್ಯವಾಗುತ್ತದೆ. ಆದರೆ, ಐತಿಹಾಸಿಕ ಪ್ರಮಾದಗಳನ್ನು ಪ್ರಸ್ತುತ ದಿನಗಳಲ್ಲಿ ಬಗೆಹರಿಸಲು ಆಗಲ್ಲ. ಎರಡೂ ರಾಜ್ಯಗಳ ಜನರು ನೀರು ಉಪಯೋಗದ ಕುರಿತು ಆದ್ಯತೆ ನೀಡುವುದು ವಿವೇಕತನ ಎಂದರು.


ಮೈಸೂರು- ಮದ್ರಾಸ್ ವಿವಾದದಲ್ಲಿ ಅನೇಕ ಆಯಾಮಗಳಿವೆ. ತಾಂತ್ರಿಕ, ರಾಜಕೀಯ, ಸಾಮಾಜಿಕ ಸಮಸ್ಯೆಗಳೂ ಇವೆ. ಈ ವಿವಾದದ ಸಮಸ್ಯೆಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರೂ ಸರಿಪಡಿಸಲಾಗದು. ಎರಡು ರಾಜ್ಯಗಳ ರೈತರು ಕುಳಿತು ಚರ್ಚಿಸಬೇಕು. ಕಾವೇರಿ ನೀರು ವ್ಯರ್ಥವಾಗದಂತೆ ಬಳಕೆ ಮತ್ತು ಪರಿಸರ ಸಂರಕ್ಷಣೆಗೂ ಒತ್ತು ನೀಡಬೇಕಿರುವುದು ಈಗಿನ ತುರ್ತು ಅಗತ್ಯವಾಗಿದೆ ಎಂದರು.


ಅಧಿಕೃತ ದಾಖಲೆ:


ಬಿ.ಚಂದ್ರಶೇಖರ್ ಅವರು ತಮ್ಮ ಕೃತಿಯಲ್ಲಿ ಕಾವೇರಿ ವಿವಾದವನ್ನು ಅಧಿಕೃತ ದಾಖಲೆಗಳಿಂದ ರಚಿಸಿದ್ದಾರೆ. ಈ ವಿಷಯವನ್ನು ಲೇಖಕರೂ ರಾಜಕೀಯ ನೆಲೆಯಿಂದಲೂ ನೋಡಬಹುದಾಗಿತ್ತು. ಕಾವೇರಿ ಕುಟುಂಬದ ಬಗ್ಗೆ ಇನ್ನೂ ಸ್ವಲ್ಪ ಚರ್ಚೆ ಮಾಡಬಹುದಿತ್ತು ಎಂದು ಪ್ರೊ.ವಿ.ಕೆ. ನಟರಾಜ್ ಹೇಳಿದರು.


ಗುಲಾಮರ ಸ್ಥಿತಿಯಲ್ಲೇ ಇದ್ದೇವೆ:


ನಿವೃತ್ತ ಪ್ರಾಧ್ಯಾಪಕ ಪ್ರೊ.ಪಿ.ವಿ.ನಂಜರಾಜೇಅರಸ್ ಮಾತನಾಡಿ, ಕಾವೇರಿ ನದಿ ರಾಜ್ಯ ಬಿಟ್ಟು ಆಚೆ ಹರಿಯದಿದ್ದರೆ ವಿವಾದವೇ ಇರುತ್ತಿರಲಿಲ್ಲ. ಬ್ರಿಟಿಷರ ಕಾಲದಲ್ಲಿ ಮೈಸೂರು ರಾಜರು ಗುಲಾಮರಾಗಿದ್ದರು. ಇವತ್ತೂ ನಾವು ಗುಲಾಮಗಿರಿಯ ಸ್ಥಿತಿಯಲ್ಲಿದ್ದೇವೆ ಎಂದು ಹೇಳಿದರು.
ಈ ವಿವಾದದ ಬಗ್ಗೆ ಸಮಗ್ರ ಮಾಹಿತಿಯನ್ನು ದಾಖಲು ಮಾಡಿರುವ ಚಂದ್ರಶೇಖರ್, ಕಾವೇರಿ ನದಿ ನೀರು ಬಿಡುವಂತೆ ಆದೇಶಿಸಿದ ಕೋರ್ಟ್ ತೀರ್ಪನ್ನು ಧಿಕ್ಕರಿಸಿದ ಏಕೈಕ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಮಂಡ್ಯದಿಂದ ಕೆ.ಶಂಕರೇಗೌಡ ಮತ್ತು ಎಸ್.ಎಂ. ಕೃಷ್ಣ ಅವರ ನೇತೃತ್ವದಲ್ಲಿ ನಡೆದ ಚಡ್ಡಿ ಮೆರವಣಿಗೆ ಬಗ್ಗೆ ಕೃತಿಯಲ್ಲಿ ದಾಖಲಿಸಬೇಕಿತ್ತು ಎಂದರು.


ಅಹಂಕಾರ ಬಿಟ್ಟು ತೀರ್ಮಾನಕ್ಕೆ ಬನ್ನಿ:


ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಕಾವೇರಿ ವಿವಾದ ಜೀವಂತವಾಗಿಟ್ಟರೆ ತಮಿಳುನಾಡು ಸರ್ಕಾರಕ್ಕೆ ಬಲ. ಆದರೆ, ನೀರು ನಮ್ಮ ಬದುಕಿನ ಪ್ರಶ್ನೆ. ಒಂದು ದೇಶದ ಜನರಾದ ತಮಿಳುನಾಡು ಮತ್ತು ಕರ್ನಾಟಕದವರು ಒಟ್ಟಾಗಿ ಕುಳಿತು ಚರ್ಚೆ ಮಾಡಬೇಕು ಎಂದರು.


ನದಿ ನೀರು ಹಂಚಿಕೆ ಕುರಿತಾಗಿ ಕಾವೇರಿ ನ್ಯಾಯಾಧೀಕರಣದ ಲೆಕ್ಕಾಚಾರಗಳು ಉಳಿಯುವುದಿಲ್ಲ. ಈಗ ನೀರನ್ನು ವಿವೇಕದಿಂದ ಬಳಸುವ ಹೊಸ ಪದ್ಧತಿ ಆರಂಭವಾಗಬೇಕಿದೆ. ಶಕ್ತಿ ತೋರಿಸಿ ನೀರು ಕಿತ್ತುಕೊಂಡೆ ಎಂಬ ಅಹಂಕಾರವನ್ನು ಬಿಟ್ಟು ತೀರ್ಮಾನಕ್ಕೆ ಬರಬೇಕಿದೆ ಎಂದು ತಿಳಿಸಿದರು.


ಕಾವೇರಿ ನದಿ ನೀರು ಹಂಚಿಕೆಯಲ್ಲಿ ಹಿಂದಿನಿಂದಲೂ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಕೇಂದ್ರದ ನಾಯಕತ್ವ ತಮಿಳುನಾಡು ಕೆರಳುವುದನ್ನು ತಡೆಯಲು ಮತ್ತು ಕರ್ನಾಟಕವನ್ನು ಹ್ಯಾಂಡಲ್ ಮಾಡಬಹುದು ಎಂಬ ಮನಸ್ಥಿತಿಯಿಂದ ಅನ್ಯಾಯವಾಗುತ್ತಲೇ ಇದೆ. ಬ್ರಿಟಿಷರು ಮತ್ತು ಭಾರತದ ಆಡಳಿತಗಾರರ ಸಾಮ್ರಾಜ್ಯಶಾಹಿ ಮನಸ್ಥಿತಿ ಕರ್ನಾಟಕದ ಮೇಲೆ ದಬ್ಬಾಳಿಕೆ ಮಾಡುತ್ತಾ ಬಂದಿದೆ ಎಂದು ಪ್ರೊ.ಎಂ. ಕೃಷ್ಣೇಗೌಡ ಕಿಡಿಕಾರಿದರು.


ಲೇಖಕ ಸಿ.ಚಂದ್ರಶೇಖರ್, ಪ್ರಕಾಶಕ ಅಭಿರುಚಿ ಗಣೇಶ್, ಜಿ.ಬಿ.ರಂಗಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net