

ವಿರಾಜಪೇಟೆ: ವಿರಾಜಪೇಟೆ ಸಮೀಪದ ಬಿಳುಗುಂದ ಗ್ರಾಮದಲ್ಲಿ ಒಂಟಿ ಸಲಗ ಸಂಚಾರ ಹಿನ್ನೆಲೆಯಲ್ಲಿ ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು.
ಮೂರು ದಿನಗಳಿಂದ ಒಂಟಿ ಸಲಗವೊಂದು ಗ್ರಾಮದ ಕಾಫಿ ತೋಟ, ಗದ್ದೆ ಹಾಗೂ ಮನೆಯ ಸಮೀಪ ಪ್ರತ್ಯಕ್ಷವಾಗುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಇದರಿಂದಾಗಿ ಬಿಳುಗುಂದ ಗ್ರಾಪಂ ಸದಸ್ಯ ಐನಂಡ ಪ್ರತಾಪ್, ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸಂಕೇತ್ ಪೂವಯ್ಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಒಂಟಿ ಸಲಗ ಓಡಾಡಿದ ಸ್ಥಳ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಸಂಕೇತ್ ಪೂವಯ್ಯ, ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುವ ಕಾರ್ಯ ಈಗಾಗಲೇ ನಡೆಯುತ್ತಿದೆ. ಸಾಕಾನೆಗಳನ್ನು ಬಳಸಿ ಕಾಡಾನೆ ಓಡಿಸಲು ಕಾರ್ಯಾಚರಣೆಗೆ ಗ್ರಾಮಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡು ವರದಿ ನೀಡಬೇಕು. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಬಿಳುಗುಂದ ಗ್ರಾಮ ಪಂಚಾಯಿತಿ ಸದಸ್ಯ ಅನಿಫ್, ವಿರಾಜಪೇಟೆ ಪುರಸಭೆಯ ನಾಮನಿರ್ದೇಶನ ಸದಸ್ಯ ಶಬರೀಶ್ ಇತರರು ಇದ್ದರು.