

ಮೈಸೂರು: ನಗರ ಭೂ ಮಾಪನ ಶಾಖೆ ಅಧಿಕಾರಿಗಳ ಯಡವಟ್ಟಿನಿಂದ ಅನ್ಯಾಯವಾಗಿದೆ ಎಂದು ಆರೋಪಿಸಿ ಸೋಮವಾರ ಮಹದೇವಪುರ ಬಿ ಬ್ಲಾಕ್ ನಿವಾಸಿ ಕಪನಿಗೌಡ ಏಕಾಂಗಿ ಪ್ರತಿಭಟನೆ ನಡೆಸಿದರು.
ನಜರ್‌ಬಾದ್‌ನಲ್ಲಿರುವ ಭೂ ದಾಖಲೆಗಳ ಜಂಟಿ ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರು ನನಗೆ ಮೋಸ ಮಾಡಿದ್ದಾರೆ. ಶ್ರೀರಾಂಪುರ ಸರ್ವೇ ನಂ. 148:1ಎ ರ ಬಾಬ್ತು 35 ಗುಂಟೆಗೆ ಸಂಬಂಧಿಸಿದಂತೆ 3 ಜನ ಸರ್ವೇಯರುಗಳು ಅಳತೆ ಮಾಡಿದ್ದಾರೆ. ಅದರಲ್ಲಿ ಒಬ್ಬರು ಸರಿಯಾಗಿಲ್ಲ ರದ್ದುಪಡಿಸಬಹುದು ಎಂದು ವರದಿ ನೀಡಿದ್ದರೆ, ಇನ್ನೊಬ್ಬರು ಸರಿಯಾಗಿದೆ ಎಂದು, ಮತ್ತೊಬ್ಬರು ಸರ್ವೇಯರ್ ಸರ್ವೆ ನಂಬರ್ ಬರೆಸಿಕೊಂಡಿದೆ ಎಂದು ವಿಭಿನ್ನ ಹೇಳಿಕೆ ಹಾಗೂ ಅಳತೆ ವರದಿ ನೀಡಿರುತ್ತಾರೆ ಎಂದು ದೂರಿದರು.
ಇದರಿಂದ ನನಗೆ ಜಮೀನಿನ ಸರಿಯಾದ ಅಳತೆ ಸಿಗದೆ ಅನ್ಯಾಯವಾಗಿದೆ. ಈ ಬಗ್ಗೆ ಜಂಟಿ ನಿರ್ದೇಶಕರು, ಸಹಾಯಕ ನಿರ್ದೇಶಕರಿಗೆ ಮನವಿ ಮಾಡಿದರೂ ಸೂಕ್ತವಾಗಿ ಸ್ಪಂದಿಲ್ಲ. ನನಗೆ ನ್ಯಾಯ ಸಿಗುವವರೆಗೆ ಇಲ್ಲಿಯೇ ಪ್ರತಿಭಟನೆ ನಡೆಸುತ್ತೇನೆ ಎಂದು ಕಚೇರಿ ಮುಂದೆ ಧರಣಿ ಕುಳಿತಿದ್ದಾರೆ.