ನವ ದೊಡ್ಡಬಳ್ಳಾಪುರ ಕಲ್ಪನೆಗೆ ಭದ್ರ ಅಡಿಪಾಯ

dbp
Published on

ರಿಪೋರ್ಟ್ ಕಾರ್ಡ್ ತೆರೆದಿಟ್ಟ ಶಾಸಕ ಧೀರಜ್ ಮುನಿರಾಜು ಅಭಿವೃದ್ಧಿ ವಿಚಾರದಲ್ಲಿ ದ್ವೇಷ ರಾಜಕೀಯ ಬೇಡವೆಂದ ಶಾಸಕ

ದೊಡ್ಡಬಳ್ಳಾಪುರ: ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ನವ ದೊಡ್ಡಬಳ್ಳಾಪುರ ಕಲ್ಪನೆಗೆ ಈಗಾಗಲೇ ಅಡಿಪಾಯ ಹಾಕಲಾಗಿದೆ. ಮುಂಬರುವ ದಿನಗಳಲ್ಲಿ ನವ ದೊಡ್ಡಬಳ್ಳಾಪುರ ಕಲ್ಪನೆಗೆ ತಕ್ಕಂತೆ ಕಾರ್ಯಮಾಡುತ್ತಾ ಟೀಕಾಕಾರರಿಗೆ ಅಭಿವೃದ್ಧಿ ಕಾರ್ಯಗಳಿಂದಲೇ ಉತ್ತರಿಸುತ್ತೇನೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.


ನಗರದ ಅರ್ಕಾವತಿ ಬಡಾವಣೆಯಲ್ಲಿರುವ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು, ಈ ವರೆಗೆ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳ ವಿವರ ಒದಗಿಸಿದರು.


ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಮುಖ್ಯವಾಗಿ ತಾಲ್ಲೂಕಿನ ಭಕ್ತರಹಳ್ಳಿ, ದೊಡ್ಡ ತುಮಕೂರು, ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹೆಚ್ಚು ಒತ್ತು ನೀಡಲಾಗಿದೆ. ಆರ್.ಡಿ.ಪಿ.ಆರ್ ಇಲಾಖೆಯೊಂದಿಗೆ ಚರ್ಚಿಸಿ ಟೆಂಡರ್ ಪಡೆಯುವ ಗುತ್ತಿಗೆದಾರರಿಗೆ ಸೂಕ್ತ ಷರತ್ತುಗಳೊಂದಿಗೆ ಕರ್ತವ್ಯ ನಿರ್ವಹಿಸುವಂತೆ ತಿಳಿಸಲಾಗಿದೆ. 9.5ಕೋಟಿ ವೆಚ್ಚದಲ್ಲಿ ಕಾಡನೂರು ಗ್ರಾಮದಿಂದ ಪೈಪ್ ಲೈನ್ ಗಳ ಮೂಲಕ ದೊಡ್ಡತುಮಕೂರು,ಮಜರಾ ಹೊಸಹಳ್ಳಿ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದರು.


ಎಂಎಸ್ಜಿಪಿ ಘಟಕಕ್ಕೆ ಬೀಗ ಶತಃಸಿದ್ಧ: ತಾಲ್ಲೂಕಿನ ಚಿಗರೇನಹಳ್ಳಿಯಲ್ಲಿರುವ ತ್ಯಾಜ್ಯವಿಲೇವಾರಿ ಘಟಕವಾದ ಎಂಎಸ್ಜಿಪಿ ಘಟಕವನ್ನ ಮುಚ್ಚಿಸುವವರೆಗೂ ಹೋರಾಟ ಮಾಡಲಾಗುವುದು. ಈಗಾಗಲೇ ಕಳೆದ ಒಂದೂವರೆ ವರ್ಷದಿಂದ ಬಿವಿಎಂಪಿಯಿಂದ ಬರುವ ಅನುದಾನವನ್ನು ತಿರಸ್ಕರಿಸಲಾಗಿದೆ. ಪರಿಸರ ಮಾಲಿನ್ಯ ಮಂಡಳಿ ಅಧಿಕಾರಿಗಳೊಂದಿಗೆ ಘಟಕ ಪರಿಶೀಲನೆ ನಡೆಸಿದ್ದೇನೆ. ಘಟಕದಲ್ಲಿ ಶೇ.70 ರಷ್ಟು ಜನ ಬಾಂಗ್ಲಾದೇಶದವರಿದ್ದಾರೆ. ಇದರ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ತಿಳಿಸಿದ್ದೇನೆ. ಘಟಕ ಮುಚ್ಚುವ ವಿಚಾರದಲ್ಲಿ ರಾಜೀಯಾಗುವುದಿಲ್ಲ ಎಂದರು.
ಪ್ರತಿ ಪಂಚಾಯತಿಗೆ 3 ಕೋಟಿ ಅನುದಾನ: ಜಿಲ್ಲೆಯ ನರೇಗಾ ಕಾಮಗಾರಿಗಳ ಪ್ರಗತಿಯಲ್ಲಿ ತಾಲೂಕು ಮೊದಲನೇ ಸ್ಥಾನದಲ್ಲಿದೆ. ಪ್ರತಿ ಗ್ರಾಮದಲ್ಲಿ ಯೋಜನೆಯು ಸಮರ್ಪಕವಾಗಿ ಜನತೆಗೆ ತಲುಪಿದೆ, ಮುಂದೆ ಪ್ರತಿ ಪಂಚಾಯಿತಿಗೆ 3 ಕೋಟಿಗಳಷ್ಟು ಅನುದಾನದ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿಂದೆ ಮಾಡಿದ್ದ ಕ್ರಿಯಾಯೋಜನೆಯನ್ನು ಯಥಾವತ್ತಾಗಿ ಕಾರ್ಯರೂಪಕ್ಕೆ ತರುತ್ತಿದ್ದು ಯಾವುದೇ ಬದಲಾವಣೆ ಮಾಡಿಲ್ಲ, ನಾನು ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದರು.


ನಗರಸಭೆಯಲ್ಲಿ ಖರ್ಚೇ ಹೆಚ್ಚು: ನಗರಸಭೆಯಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ. 27ರಿಂದ 28ಸಾವಿರ ಮನೆಗಳಿರುವ ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಸರ್ಕಾರಿ ಅನುದಾನಗಳ ಕೊರತೆ ಇದೆ, ಪ್ರತಿ ತಿಂಗಳು ಸುಮಾರು 75 ಲಕ್ಷ ಆದಾಯವಿದೆ ಎಂದು ಭಾವಿಸಿದರೆ ನಗರಸಭಾ ವ್ಯಾಪ್ತಿಯ ಜನತೆಗೆ ಸೌಕರ್ಯ ಕಲ್ಪಿಸಲು 1 ಕೋಟಿ 40 ಲಕ್ಷದಷ್ಟು ಮೊತ್ತದ ಅವಶ್ಯಕತೆ ಇದೆ. ಇಂತಹ ಸಂದರ್ಭದಲ್ಲಿ ನಮ್ಮಲ್ಲಿ ಬರುವ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ. ನಗರ ಭಾಗದ ಒಳಚರಂಡಿ ನಿರ್ವಹಣೆಗೆ 136ಕೋಟಿ ಮೊತ್ತದ ಅನುದಾನವನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದರು.


ಆರೋಗ್ಯಕ್ಕೆ ಹೆಚ್ಚಿನ ಒತ್ತು : ಕ್ಷೇತ್ರದ ಜನತೆಯ ಆರೋಗ್ಯ ದೃಷ್ಟಿಯಿಂದ ಜಿಲ್ಲಾಸ್ಪತ್ರೆಗಾಗಿ ಸಿದ್ದೇನಾಯಕನಹಳ್ಳಿಯಲ್ಲಿ 9 ಎಕರೆ ಪ್ರದೇಶದಲ್ಲಿ ಸುಮಾರು 22 ಕೋಟಿ ವೆಚ್ಚದಲ್ಲಿ 50 ಬೆಡ್ ಗಳ ವ್ಯವಸ್ಥೆ ಇರುವ ಕ್ರಿಟಿಕಲ್ ಕೇರ್ ನಿರ್ಮಾಣಕ್ಕೆ ಸಿದ್ದವಾಗಿದೆ. ಈ ಹಿಂದೆ ನಮ್ಮ ತಾಲೂಕಿಗೆ ನೀಡಲಾಗಿದ್ದ ಜಿಲ್ಲಾಸ್ಪತ್ರೆಯನ್ನು ದೇವನಹಳ್ಳಿಗೆ ಸ್ಥಳಾಂತರಿಸುವ ಹುನ್ನಾರ ನಡೆದಿತ್ತು, ಆದರೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದ ಹೋರಾಟದ ಫಲವಾಗಿ ಜಿಲ್ಲಾಸ್ಪತ್ರೆ ನಮ್ಮಲ್ಲಿಯೇ ಉಳಿದಿದೆ. 195 ಕೋಟಿ ವೆಚ್ಚದಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣವಾಗಲಿದೆ. ಜಿಲ್ಲಾಸ್ಪತ್ರೆ ಕೈತಪ್ಪಿಸುವ ಹುನ್ನಾರಕ್ಕೆ ತಾಲ್ಲೂಕಿನ ವಿರೋಧ ಪಕ್ಷದ ನಾಯಕರೇ ಕಾರಣ ಎಂದರು. ಪ್ರಸ್ತುತ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ನೀಗಿಸಲು 6 ಎಕರೆ ಪ್ರದೇಶದಲ್ಲಿ ನಸಿರ್ಂಗ್ ಕಾಲೇಜು ನಿರ್ಮಾಣಕ್ಕೆ ಪ್ರಸ್ತಾವನೆ ನೀಡಲಾಗಿದ್ದು, ಸಂಬಂಧಪಟ್ಟ ಇಲಾಖೆ ವತಿಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದರು.


ನೇಕಾರರ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಾಥಮಿಕವಾಗಿ 75 ಕೊಟಿ ವೆಚ್ಚದಲ್ಲಿ ತಾಲ್ಲೂಕಿನ ಬಾಶೆೆಟ್ಟಿಹಳ್ಳಿಯಲ್ಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಅಂಡರ್ ಗ್ರೌಂಡ್ ಕರೆಂಟ್ ವ್ಯವಸ್ಥೆ ಕಾಮಗಾರಿಗೆ ಚಾಲನೆ ನೀಡುತ್ತಿದ್ದು ಬಳಿಕ ನಗರದಲ್ಲಿ ಜಾರಿಗೆ ತರಲಾಗುವುದು. ನೇಕಾರರ ಹಿತರಕ್ಷಣೆ ಸಲುವಾಗಿ ಪವರ್ ಲೂಮ್ ಪ್ರೊಟೆಕ್ಷನ್ ಆಕ್ಟ್ ತರಲು ಚಿಂತನೆ ನಡೆದಿದೆ. ಈ ಕಾಯ್ದೆ ಜಾರಿಯಾದರೆ ನೇಕಾರಿಕೆ ಹಾಗೂ ನೇಕಾರರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.


ದೇವಾಂಗ ಮಂಡಳಿಗೆ ಧನ್ಯವಾದ: ಕರೋನ ಸಂದರ್ಭದಲ್ಲಿ ವಿದ್ಯುತ್ ಚಿತಾಗಾರದ ದೇವಾಂಗ ಸಮುದಾಯದ ಸೇವೆ ತಾಲ್ಲೂಕಿನ ಜನತೆ ಮರೆಯಲು ಸಾಧ್ಯವಿಲ್ಲ, ಇದಕ್ಕೆ ಪೂರಕವಾಗಿ ತಾಲ್ಲೂಕಿನ ಒಬದೇನಹಳ್ಳಿಯ ಸಮೀಪ 4ಕೋಟಿ ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net