

ಬಾಗಲಕೋಟೆ: ನನ್ನ ಬಳಿ ದೈವಿ ಕಲ್ಲು ಇದೆ, ಈ ಕಲ್ಲು ಇರುವವರಿಗೆ ಅದೃಷ್ಟ ಒಲಿಯುತ್ತೆ ಎಂದು ಯೂಟೂಬ್ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದವ ಮಾಡಬಾರದ್ದು ಮಾಡಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಬಾಗಲಕೋಟೆ ನಗರದ ನಿವಾಸಿ ಅಜಯ ಅಲಿಯಾಸ್ ಸಮೀರ್ ಜಾಫರ್ ಜಾಹಗೀರದಾರ ಬಂಧಿತ. ನಿಮಗೆ ಅದೃಷ್ಟ ಒಲಿಯಬೇಕೆ? ಹಾಗಿದ್ದರೆ 7 ಲಕ್ಷ ರೂಪಾಯಿ ಕೊಡಿ, ದೈವಿ ಕಲ್ಲು(ಸೊಲೆಮಾನ್ ಸ್ಟೋನ್) ನೀಡುವೆ. ಈ ಕಲ್ಲು ನಿಮ್ಮ ಬಳಿ ಇದ್ದರೆ ಅದೃಷ್ಟ ಒಲಿಯುತ್ತೆ ಎಂದು ಯೂಟೂಬ್ಗೆ ಅಜಯ ವಿಡಿಯೋ ಹಾಕಿದ್ದ.
ಈ ವಿಡಿಯೋ ನೋಡಿದ ಅಶೋಕ ರೇವಣಸಿದ್ದಪ್ಪ ಇಂಡಿ ಎಂಬಾತ, ದೈವಿಕಲ್ಲು ಕೊಡುವಂತೆ ಅಜಯಗೆ 5 ಲಕ್ಷ ರೂ. ನಗದು, ಕೈ ಚೈನ್ (ಚಿನ್ನದ ಆಭರಣ) ನೀಡಿದ್ದರು. ಆದರೆ, ಇದೆಲ್ಲವೂ ಸುಳ್ಳು, ದೈವು ಕಲ್ಲು ಎಂದು ನಂಬಿಸಿ ಹಣ ಪೀಕುವ ದಂಧೆ ಇದು ಎಂದು ಅರಿವಾಗುತ್ತಿದ್ದಂತೆ ಅಶೋಕ ಇಂಡಿ ಅವರು ಬಾಗಲಕೋಟೆಯ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಡಿವೈಎಸ್ಪಿ ಚಂದ್ರಕಾಂತ ನಂದರಡ್ಡಿ ಮಾರ್ಗದಶನದಲ್ಲಿ ಬಾಗಲಕೋಟೆ ಪಿಎಸ್ಐ ವಿಜಯ ಮುರಗುಂಡಿ, ಎಎಸ್ಐ ವಿ.ಕೆ.ಕುಲಕರ್ಣಿ, ಸಿಬ್ಬಂದಿ ಎಂ.ಡಿ.ಸೌದಿ, ವಿ.ಬಿ.ಹಾದಿಮನಿ, ಮುತ್ತು ಅಜಮನಿ, ನಾಸೀರ್ ಬೀಳಗಿ ಒಳಗೊಂಡ ತಂಡವು ಆರೋಪಿ ಅಜಯನನ್ನು ಬಂಧಿಸಿದ್ದಾರೆ. ಆತನಿಂದ 5 ಲಕ್ಷ ರೂ. ನಗದು, ಒಂದು ಚಿನ್ನದ ಬ್ರಾಸ್ಲೇಟ್ ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಗೆ ಎಸ್ಪಿ ಲೋಕೇಶ ಜಗಲಾಸರ್ ಮೆಚ್ಚುಗೆ ವ್ಯಕ್ತಪಡಿಸಿ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.