

ವಿಜಯಪುರ: ಹೆತ್ತ ತಂದೆ&ತಾಯಿ ಪ್ರೀತಿ ಮತ್ತು ಹುಟ್ಟಿದ ಊರನ್ನು ತೊರೆದು ದೇಶ ಸೇವೆಯೇ ಈಶ ಸೇವೆ ಎನ್ನುತ್ತ ದೇಶದ ಜನರ ಸುರತೆಗಾಗಿ ಪ್ರಾಣ ಒತ್ತೆ ಇಡುವವನೇ ಭಾರತ ಮಾತೆಯ ಹೆಮ್ಮೆ ಸುಪುತ್ರ ಎಂದು ನಿವೃತ್ತ ಯೋಧ ಜಟ್ಟೆಪ್ಪ ನಾವಿ ಹೇಳಿದರು.
ನಗರದ ಕನಕದಾಸ ಬಡಾವಣೆಯ ಸಿದ್ಧೇಶ್ವರ ಕೋಚಿಂಗ್ ಕ್ಲಾಸೆಸ್, ಶಿರಕನಹಳ್ಳಿ ಗ್ರಾಮದ ಗೆಳೆಯರ ಬಳಗ ಮತ್ತು ಗುರು ಹಿರಿಯರ ವತಿಯಿಂದ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಗಡಿಯಲ್ಲಿ ಸೈನಿಕರು ಅನುಭವಿಸುವ ಕಷ್ಟ, ಅಲ್ಲಿನ ಜೀವನ ಪರಿಸ್ಥಿತಿ ನೆನೆಸಿದರೆ ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ. ಅವರ ಮನಸ್ಸು ಸದಾ ದೇಶ ಸೇವೆಗಾಗಿ ಮಿಡಿಯುವ ಕಾರಣದಿಂದ ಎಂತಹ ಕಠಿಣ ಪರಿಸ್ಥಿತಿ ಕೂಡ ಎದುರಿಸುತ್ತದೆ ಎಂದರು.
ಕೋಚಿಂಗ್ ಕ್ಲಾಸೆಸ್ನ ಸಂಸ್ಥಾಪಕ ಅಧ್ಯಕ್ಷ ಸುರೇಶ ಜತ್ತಿ ಮಾತನಾಡಿ, ಇಲ್ಲಿನ ಸೈನಿಕ ಶಾಲೆಯಲ್ಲಿ ಕಲಿತು ಸೈನಿಕರಾಗಲು ಈಗಿನ ಮಕ್ಕಳಿಗೆ ವಿಪುಲ ಅವಕಾಶಗಳಿವೆ. ಇಂದಿನ ಮಕ್ಕಳು ದೇಶ ಸೇವೆ ಮಾಡುವ ಅಚಲವಾದ ಗಟ್ಟಿ ಮನಸ್ಸು ಮಾಡಬೇಕು. ಸೈನಿಕ ಶಾಲೆಯಲ್ಲಿ ಮಕ್ಕಳಿಗೆ ಶಿಣ, ಸಂಸ್ಕಾರ ಮತ್ತು ಶಿಸ್ತು ಹೇಳಿಕೊಡಲಾಗುತ್ತದೆ ಎಂದರು.
ನಿವೃತ್ತ ಕರ್ನಲ್ ಸಂಗಪ್ಪ, ಸಾಹಿತಿ ರೇವಣಸಿದ್ದಪ್ಪ ಪಟ್ಟಣಶೆಟ್ಟಿ ಮಾತನಾಡಿದರು.
ಎಸ್.ಎಸ್. ದೊಡ್ಡಮನಿ, ನಿವೃತ್ತ ಯೋಧ ಎಂ.ಎಂ. ಲೋಣಿ ವೇದಿಕೆಯಲ್ಲಿದ್ದರು. ಯೋಧ ದಂಪತಿ ಮತ್ತು ಹೆತ್ತವರನ್ನು ಸನ್ಮಾನಿಸಲಾಯಿತು. ನೀಲಾ ಜತ್ತಿ, ಶಿವಕುಮಾರ ನಾವಿ, ಜ್ಯೋತಿಪ್ರಕಾಶ, ಸಂಗೊಂಡ ಕೋರಿ ಮತ್ತಿತರರಿದ್ದರು.