

ಕೊಳ್ಳೇಗಾಲ: ಪ್ರಸ್ತುತ ಮೌಲ್ಯಕ್ಕೆ ಬೆಲೆಯೇ ಇಲ್ಲದಂತಾಗಿದ್ದು, ಅನುಮಾನದ ಗೂಡಾಗಿ ಸಮಾಜ ಬದಲಾಗುತ್ತಿದೆ ಎಂದು ಎ.ಆರ್.ಕೃಷ್ಣಮೂರ್ತಿ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ಮೌಲ್ಯಗಳನ್ನು ಅಳವಡಿಸಿಕೊಂಡು ಪ್ರತಿಯೊಬ್ಬರೂ ಜೀವನ ಸಾಗಿಸಬೇಕಿದೆ. ಎಲ್ಲ ವಿಚಾರವನ್ನು ಅನುಮಾನ ರೀತಿಯಲ್ಲಿಯೇ ವ್ಯಾಖ್ಯಾನಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಾಸ್ತವತೆಗೆ ಅನುಗುಣವಾಗಿ ಮುದ್ರಣ ಹಾಗೂ ದೃಶ್ಯ ಮಾಧ್ಯಮ ಕೆಲಸ ಮಾಡಬೇಕು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಈ ಮೂರು ಅಂಗಗಳಷ್ಟೇ 4ನೇ ಅಂಗವಾದ ಪತ್ರಿಕಾ ರಂಗಕ್ಕೂ ಜವಾಬ್ದಾರಿ ಇದೆ. ಸಮಾಜದ ಅಂಕು-ಡೊಂಕುಗಳನ್ನು ಗಮನಿಸಿ ಬದಲಾಯಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಶಕ್ತಿ ಪತ್ರಿಕೋದ್ಯಮಕ್ಕಿದೆ ಎಂದರು.
ಭವನ ನಿರ್ಮಾಣಕ್ಕೆ ಶ್ರಮ: ಕೊಳ್ಳೇಗಾಲದಲ್ಲಿ ನಿರ್ಮಾಣ ಆಗುತ್ತಿರುವ ಕಾರ್ಯನಿರತ ಪತ್ರಕರ್ತರ ಭವನ ಪೂರ್ಣಗೊಳಿಸಲು ಅನುದಾನ ಲಭ್ಯತೆ ಆಧಾರದ ಮೇಲೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ಮುಂದಿನ ವರ್ಷದಿಂದ ಜಿಲ್ಲೆ ಹಾಗೂ ಕೊಳ್ಳೇಗಾಲ ತಾಲೂಕು ಮಟ್ಟದಲ್ಲಿ ದತ್ತಿ ನಿಧಿ ಸ್ಥಾಪಿಸಲಾಗುವುದು ಎಂದರು.
ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ, ಕೊಳ್ಳೇಗಾಲ ಪತ್ರಕರ್ತರ ಭವನಕ್ಕೆ ಪರಿಷತ್ ಸದಸ್ಯರಿಂದ ಅನುದಾನ ಕೊಡಿಸಲು ಶ್ರಮಿಸುತ್ತೇನೆ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಸಿದ್ದರಾಜು, ಜಿಲ್ಲಾಧ್ಯಕ್ಷ ದೇವರಾಜು, ರಾಜ್ಯ ಪರಿಷತ್ ಸಮಿತಿ ಸದಸ್ಯ ಗೂಳಿಪುರ ನಂದೀಶ್, ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಎಸ್.ಜಯಣ್ಣ, ಮಾತನಾಡಿದರು. ಜಿಲ್ಲಾ ಮಟ್ಟದ ದತ್ತಿ ಪ್ರಶಸ್ತಿ ವಿಜೇತರಾದ ಹಿರಿಯ ಪತ್ರಕರ್ತರಾದ ಎಸ್.ರಾಜಶೇಖರ್, ಎಸ್. ರಾಜೇಶ್ ಹಾಗೂ ಪತ್ರಿಕಾ ವಿತರಕರಾದ ರಫತ್ ಉಲ್ಲಾಖಾನ್, ಮಹದೇವ, ಪಿ.ನಟೇಶ್ ಬಾಬು, ಸತೀಶ್ ಮಲ್ಲಿಕಾರ್ಜುನ ಅವರನ್ನು ಅಭಿನಂದಿಸಲಾಯಿತು. ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ರಾಜೇಶ್, ಡಿ.ನಟರಾಜು ಇತರರಿದ್ದರು.
(((ಫೋಟೋ ಕಳುಹಿಸಲಾಗುವುದು.)))