

ಶಿವಮೊಗ್ಗ: ಕ್ಷಯರೋಗದ ಕುರಿತು ಉದಾಸೀನ ಮಾಡಿದಲ್ಲಿ ಕೇವಲ ರೋಗಿಗೆ ಮಾತ್ರವಲ್ಲ, ಅವರ ಕುಟುಂಬ ಮತ್ತು ಸಮಾಜಕ್ಕೂ ಹಾನಿ. ಆದ್ದರಿಂದ ಶೀಘ್ರ ಪತ್ತೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಅತಿ ಮುಖ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್ ಹೇಳಿದರು.
ತುಂಗಾನಗರ ಆರೋಗ್ಯ ಕೇಂದ್ರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರದ ಸಹಯೋಗದೊಂದಿಗೆ ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನದ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ಷಯರೋಗವನ್ನು ಉದಾಸೀನ ಮಾಡಿದರೆ ಸಮಾಜಕ್ಕೂ ಮಾರಕವಾಗುತ್ತದೆ. ಆದ್ದರಿಂದ ಲಕ್ಷಣಗಳು ಕಂಡು ಬಂದ ತಕ್ಷಣ ಪರೀಕ್ಷೆ ಮೂಲಕ ಪತ್ತೆಹಚ್ಚಿ, ಚಿಕಿತ್ಸೆಗೆ ಒಳಪಡಬೇಕು. ಎಲ್ಲರೂ ಕೂಡ ಕ್ಷಯ ರೋಗದ ಲಕ್ಷಣಗಳ ಕುರಿತು ತಿಳಿದುಕೊಂಡು ಎಚ್ಚರಿಕೆವಹಿಸಬೇಕು. ಒಂದು ವಾರಕ್ಕೂ ಹೆಚ್ಚಿನ ಕಾಲ ಜ್ವರ, ಶೀತ, ಕೆಮ್ಮು ಇದ್ದರೆ ಉದಾಸೀನ ಮಾಡಬಾರದು ಎಂದರು.
ಇಂದಿನಿಂದ 100 ದಿನಗಳ ಕಾಲ ಕ್ಷಯರೋಗದ ಕುರಿತು ಜಾಗೃತಿ ಮೂಡಿಸುವ ಈ ಅಭಿಯಾನ ನಡೆಯಲಿದೆ. ಸಾರ್ವಜನಿಕರು, ರೋಗಿಗಳಿಗೆ, ಅವರ ಕುಟುಂಬಕ್ಕೆ ಸಹಾಯ ಮಾಡಿ ಕ್ಷಯ ನಿವಾರಣೆಗೆ ಪಣ ತೊಡೋಣ, ಸಮಾಜವನ್ನು ಟಿಬಿ ಮುಕ್ತಗೊಳಿಸೋಣ ಎಂದು ಕರೆ ನೀಡಿದರು.
ಡಬ್ಲುೃಎಚ್‌ಒ ಪ್ರತಿನಿಧಿ ಡಾ. ರಾಜೀವ್ ಮಾತನಾಡಿ, ಹೈರಿಸ್ಕ್ ಗುಂಪುಗಳನ್ನು ಭೇಟಿ ಮಾಡಿ, ಸಂಶಯ ಇರುವ ವ್ಯಕ್ತಿಗಳಿಗೆ ಸಿಬಿ ನ್ಯಾಟ್, ಕಫ ಪರೀಕ್ಷೆ ಮಾಡಿ, ಕ್ಷಯ ರೋಗ ಪತ್ತೆಯಾದಲ್ಲಿ ಚಿಕಿತ್ಸೆ ಕೊಡಿಸುವುದು. ಸಿವೈಟಿಬಿ ಪರೀಕ್ಷೆ ಮುಖಾಂತರ ಸೋಂಕು ಇದೆಯಾ ಎಂದು ಪತ್ತೆ ಮಾಡಿ ನಿಯಂತ್ರಣ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶ. ಪತ್ತೆ ಮತ್ತು ಚಿಕಿತ್ಸೆ ಅತಿ ಮುಖ್ಯವಾಗಿದ್ದು ಎಲ್ಲರೂ ಸಹಕರಿಸಬೇಕು ಎಂದರು.
ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಬಿ.ಪಿ.ನಾಗೇಶ್, ಆರ್‌ಸಿಎಚ್‌ಒ ಡಾ.ಮಲ್ಲಪ್ಪ, ಡಿಎಸ್‌ಒ ಡಾ.ನಾಗರಾಜ್ ನಾಯ್ಕ್, ಎನ್‌ವಿಬಿಡಿಸಿ ಅಧಿಕಾರಿ ಡಾ.ಗುಡುದಪ್ಪ ಕುಸಬಿ, ಡಿಎಲ್‌ಒ ಡಾ.ಕಿರಣ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಿಂಗರಾಜ್, ಟಿಎಚ್‌ಒ ಡಾ. ಚಂದ್ರಶೇಖರ್, ತುಂಗಾನಗರ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಭೀಮಪ್ಪ, ಡಾ. ಮೋಹನ್, ಡಾ. ಹರ್ಷವರ್ಧನ್, ಆರೋಗ್ಯ ಇಲಾಖೆಯ ರೇಷ್ಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಅಖ್ತರ್ ಪಾಲ್ಗೊಂಡಿದ್ದರು.