ಪ್ರಜ್ಞೆ ಕಳೆದುಕೊಂಡಿರುವ ಸಮಾಜ: ಚಿಂತಕ ಕೋಟಗನಹಳ್ಳಿ ರಾಮಯ್ಯ ಕಳವಳ

mysore
Published on

ಮೈಸೂರು: ಈಗಿನ ಕಾಲಘಟ್ಟದಲ್ಲಿ ಸಮಾಜ ಪ್ರಜ್ಞೆಯನ್ನೇ ಕಳೆದುಕೊಂಡಿದೆ ಎಂದು ಚಿಂತಕ ಕೋಟಗನಹಳ್ಳಿ ರಾಮಯ್ಯ ಕಳವಳ ವ್ಯಕ್ತಪಡಿಸಿದರು.


ಪ್ರಜ್ಞಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕಲಾಮಂದಿರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಪ್ರಜ್ಞಾ ರಂಗೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.


ಪ್ರಸ್ತಕ ಕಾಲದಲ್ಲಿ ಕಲೆ, ಸಂಸ್ಕೃತಿ, ರಂಗಭೂಮಿ ಬೇರೆ ಬೇರೆ ಬಿಕ್ಕಟ್ಟಿನಲ್ಲಿವೆ. ಇದೀಗ ಜನರಿಗೆ ರಂಜನೆ-ಚಿಂತನೆಯೂ ಬೇಡವಾಗಿದೆ. ಸುದ್ದಿವಾಹಿನಿಯನ್ನು ಗಮನಿಸಿದರೆ ಇದು ಗೊತ್ತಾಗುತ್ತದೆ. ಇಂತಹ ಮನಸ್ಥಿತಿಗೆ ಸಮಾಜ ಬಂದಿದೆ. ಇದು ನತದೃಷ್ಟ ಸಮಾಜ ಎಂದು ಬೇಸರ ವ್ಯಕ್ತಪಡಿಸಿದರು.


ತಳಸಮುದಾಯದ ಮತ್ತು ಶೋಷಿತ ಸಮಾಜದ ಮಕ್ಕಳ ಮುಂದಿನ ಶಿಕ್ಷಣ ಕುರಿತು ಆಲೋಚನೆ ನಡೆಸಬೇಕಿತ್ತು. ಅದನ್ನು ಬಿಟ್ಟು ಬೇರೆಯೆಲ್ಲ ನಡೆಯುತ್ತಿದೆ. ಇದುವೇ ದುರಂತ ಎಂದರು.


ಜಾನಪದ, ರಂಗಕಲೆ ಪ್ರಯೋಗಶೀಲ ಕಲೆಗಳು. ಇವುಗಳು ಕಾಲಕ್ಕೆ ತಕ್ಕಂತೆ ಬೇರೆ ಆಯಾಮವನ್ನು ಇಷ್ಟೊತ್ತಿಗೆ ಪಡೆದುಕೊಳ್ಳಬೇಕಿತ್ತು. ಆದರೆ ಇದು ಆಗಿಲ್ಲ. ವಿಕಾಸಶೀಲತೆ, ಪ್ರಯೋಗವೂ ಕಾಣುತ್ತಿಲ್ಲ. ಎಲ್ಲವೂ ನಿಂತ ನೀರಾಗಿದೆ ಎಂದು ವಿಶ್ಲೇಷಿಸಿದರು.


ಕಪ್ಪು ಜನರು ಗುಲಾಮಗಿರಿಯಲ್ಲಿ ಸಿಲುಕಿಕೊಂಡಾಗ ಬಿಡುಗಡೆಗಾಗಿ ಸಂಗೀತದ ಪರಿಕರಗಳ ಮೂಲಕ ಸಂವಹನ ನಡೆಸಿದರು. ನಮ್ಮ ದೇಶದ ಶೋಷಿತರು ಮೌಢ್ಯದಲ್ಲೇ ಸಿಲುಕಿಕೊಂಡು ಹೊದ್ದಾಡುತ್ತಿದ್ದಾರೆ. ಆದ್ದರಿಂದ ಶೋಷಿತರ ನುಡಿ, ತಮಟೆ ಸೇರಿದಂತೆ ಇತರ ಸಂಗೀತ ವಾದ್ಯಗಳು, ಚಿಂತನೆ ಮರುಹುಟ್ಟು ಪಡೆದುಕೊಂಡು ಕಾಲಕ್ಕೆ ಅನುಗುಣವಾಗಿ ಪ್ರಯೋಗಶೀಲತೆಗೆ ತೆರೆದುಕೊಳ್ಳಬೇಕಾಗಿದೆ ಎಂದರು.


ರಂಗಕರ್ಮಿ ಸಿ.ಬಸವಲಿಂಗಯ್ಯ, ಟ್ರಸ್ಟ್ ಅಧ್ಯಕ್ಷ ಸೋಸಲೆ ಸಿದ್ದರಾಜು, ಸಾಹಿತಿ ಬನ್ನೂರು ರಾಜು, ನಿವೃತ್ತ ಪ್ರಾಂಶುಪಾಲ ಪ್ರೊ.ಸಿ.ರಾಮಸ್ವಾಮಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ನಂಜನರಾಜೇ ಅರಸ್ ಇತರರು ಇದ್ದರು.


ಜಾನಪದ ನೃತ್ಯ ಕಾರ್ಯಕ್ರಮ ಮತ್ತು ಮಂಜುನಾಥ ಬೆಳಕೆರೆ ರಚಿಸಿರುವ, ದಿನೇಶ್ ಚಮ್ಮಾಳಿಗೆ ನಿರ್ದೇಶನದಲ್ಲಿ ‘ಶರೀಫ್’ ನಾಟಕ ಪ್ರಸ್ತುತ ಪಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net