

ಸೋಮವಾರಪೇಟೆ: ಸಂಘಟಿತರಾದರೆ ಸಮಾಜ ಬಲಿಷ್ಠವಾಗುತ್ತದೆ. ಅದರಂತೆ ಸಾಮರಸ್ಯವಿದ್ದರೆ ಸೌಹಾರ್ದತೆ ನೆಲೆಸುತ್ತದೆ. ಜತೆಗೆ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡುತ್ತದೆ ಎಂದು ಪಟ್ಟಣದ ವಿರಕ್ತ ಮಠದ ಶ್ರೀ ನಿಶ್ಚಲನಿರಂಜನ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ವಿರಕ್ತ ಮಠದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸೋಮವಾರಪೇಟೆ ವೀರಶೈವ ಲಿಂಗಾಯತ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮಾಜಕ್ಕೆ ತನ್ನದೇ ಆದ ಇತಿಹಾಸವಿದೆ. ಆಚಾರ, ವಿಚಾರಗಳಿವೆ. ಅವುಗಳನ್ನು ಉಳಿಸಿ, ಬೆಳೆಸುವುದರೊಂದಿಗೆ ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕಿದೆ ಎಂದರು.
ವೀರಶೈವ ಲಿಂಗಾಯತ ಸಮಾಜದ ಆಸ್ತಿಪಾಸ್ತಿ ಮತ್ತು ಬಸವೇಶ್ವರ ಕಲ್ಯಾಣ ಮಂಟಪ ರಕ್ಷಣೆಯ ಬಗ್ಗೆ ಹಾಗೂ ವಿರಕ್ತ ಮಠದ ಬಗ್ಗೆ ಮಹಾಸಭೆಯಲ್ಲಿ ಚರ್ಚೆ ನಡೆಯಿತು. ಸಮಾಜದ ಯಜಮಾನ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶೆಟ್ರು ಮೃತ್ಯುಂಜಯ, ಕಾರ್ಯದರ್ಶಿ ನಾಗರಾಜ್ ಹಾಗೂ ಸಮಿತಿಯ ನಿರ್ದೇಶಕರು ಇದ್ದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚಿನ ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.