

ಮುಳಬಾಗಿಲು: ಮುಳಬಾಗಿಲು ನಗರಸಭೆಗೆ 16 ತಿಂಗಳ ನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಭಾಗ್ಯ ಕೂಡಿಬಂದಿದ್ದು, ಆ 26 ರಂದು ಚುನಾವಣೆ ನಿಗದಿಯಾಗಿದೆ. ಅಂದು ಬೆಳಗ್ಗೆ 10ಕ್ಕೆ ನಾಮಪತ್ರ ಸಲ್ಲಿಕೆಯೊಂದಿಗೆ ಶುರುವಾಗುವ ಚಟುವಟಿಕೆ ಮಧ್ಯಾಹ್ನ 1 ಗಂಟೆ ವರೆಗೆ ಚುನಾವಣಾಧಿಕಾರಿ ಎಸಿ ಡಾ.ಮೈತ್ರಿ ನೇತೃತ್ವದಲ್ಲಿ ನಡೆಯಲಿದೆ.
31 ಸದಸ್ಯ ಬಲದ ಮುಳಬಾಗಿಲು ನಗರಸಭೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲ. ಅತಂತ್ರ ನಗರಸಭೆಯನ್ನು ವಶಪಡಿಸಿಕೊಳ್ಳಲು ತೆನೆ ಮತ್ತು ಕೈ ಪೈಪೋಟಿಗೆ ಇಳಿದಿದ್ದು, ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಪ್ರವಾಸ ಭಾಗ್ಯ, ಹಣದ ಆಮಿಷ ಕೋಟಿಯ ಗಡಿ ದಾಟುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.
ಜೆಡಿಎಸ್- 10, ಕಾಂಗ್ರೆಸ್ -8, ಬಿಜೆಪಿ-2, ಎಸ್ಡಿಪಿಐ 1, ಪಕ್ಷೇತರ 10 ಸದಸ್ಯರಿದ್ದು, ಪಕ್ಷ ನಿಷ್ಠೆಗಿಂತ ಆಯಾ ಕಾಲಕ್ಕೆ, ಸಂದರ್ಭಕ್ಕೆ ತಕ್ಕಂತೆ ರಾಜಕೀಯ ತಿರುವು ಸದಸ್ಯರ ಓಲೈಕೆ ಮೇಲೆ ನಗರಸಭೆಯ ಅಧ್ಯಕ್ಷ & ಉಪಾಧ್ಯಕ್ಷರ ಸೋಲು& ಗೆಲುವಿನ ಲೆಕ್ಕಾಚಾರವಿದೆ. 31 ಸದಸ್ಯರ ಮತದೊಂದಿಗೆ ಶಾಸಕ, ಸಂಸದರ ಮತಗಳು ಸೇರಿ ಒಟ್ಟು 33 ಮತಗಳಲ್ಲಿ ಕನಿಷ್ಠ 17 ಮತ ಪಡೆದವರು ಗದ್ದುಗೆ ಏರಲಿದ್ದಾರೆ.
ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದ್ದು, ಜೆಡಿಎಸ್ನಿಂದ 10 ನೇ ವಾರ್ಡ್ನ ಪದ್ಮಜಾ ರಘು ಇದ್ದರೆ, ಕಾಂಗ್ರೆಸ್ನಿಂದ 31ನೇ ವಾರ್ಡ್ನ ಶಬನಾ ಬೇಗಂ, 2ನೇ ವಾರ್ಡ್ನ ನಿರೂಪಮಾ ಜಗನ್ಮೋಹನ್ರೆಡ್ಡಿ ಆಕಾಂಕ್ಷಿಗಳಾಗಿದ್ದಾರೆ. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮಾನುಲ್ಲಾ ಪತ್ನಿ ಶಬಾನ ಬೇಗಂ ಬಗ್ಗೆ ಪಕ್ಷದ ವರಿಷ್ಠರು ಒಲವು ವ್ಯಕ್ತಪಡಿಸಿ ಚುನಾವಣೆ ಎದುರಿಸಲು ಬೇಕಾಗುವ ಎಲ್ಲ ರೀತಿಯ ತಂತ್ರಗಾರಿಕೆ ಮತ್ತು ಸಾಮರ್ಥ್ಯವನ್ನು ಅಳತೆಗೋಲು ಮಾಡಿ ಅಖಾಡಕ್ಕೆ ಇಳಿಸಲು ಸಜ್ಜುಗೊಂಡಿದ್ದಾರೆ.
ಪ್ರತಿಷ್ಠೆಯಾದರೆ ರೋಚಕ ತಿರುವು
ಶೇ.50ಮಂದಿ ಅಧ್ಯಕ್ಷ ಆಕಾಂಕ್ಷಿಗಳಿದ್ದು, ಉಳಿದ ಶೇ.50 ಮಂದಿ ಆರ್ಥಿಕ ಬಲ ತುಂಬುವ ಹೊರೆ ಜೆಡಿಎಸ್ ಶಾಸಕ ಸಮೃದ್ಧಿ ವಿ.ಮಂಜುನಾಥ್ ಮೇಲಿದೆ. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಮೂಲದ ವಿ. ಆದಿನಾರಾಯಣ ಹೆಗಲೇರಿದೆ. ಜತೆಗೆ ಕ್ಷೇತ್ರದ ಮಾಜಿ ಶಾಸಕರೂ ಆದ ಕೋಲಾರ ಶಾಸಕ ಕೊತ್ತೂರು ಜಿ. ಮಂಜುನಾಥ್, ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯನ್ನು ಕೊನೆ ಕ್ಷಣದಲ್ಲಿ ಪ್ರತಿಷ್ಠೆಯಾಗಿ ತೆಗೆದುಕೊಂಡರೆ ಹಣಾಹಣಿ ರೋಚಕ ತಿರುವು ಪಡೆಯಲಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ನೇರ ಹಣಾಹಣಿ
ಉಪಾಧ್ಯಕ್ಷ ಸ್ಥಾನಕ್ಕೆ ನಿಕಟಪೂರ್ವ ಉಪಾಧ್ಯಕ್ಷೆ ಭಾಗ್ಯಮ್ಮ ರಾಮಚಂದ್ರಯ್ಯ ಮತ್ತೊಮ್ಮೆ ಜೆಡಿಎಸ್ನಿಂದ ಸ್ಪರ್ಧಿಸುವುದು ಖಚಿತವಾಗಿದ್ದು, ಜೆಡಿಎಸ್ನಿಂದ ಗೆದ್ದು ಈಗ ಕಾಂಗ್ರೆಸ್ ಜತೆ ಗುರುತಿಸಿಕೊಂಡಿರುವ ಎಂ.ಸರಳಾ ನವೀನ್ಕುಮಾರ್ ನಡುವೆ ನೇರ ಪೈಪೋಟಿ ಏರ್ಪಡಲಿದೆ. ಈ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದ್ದು, ಇಬ್ಬರಿಗೆ ಮಾತ್ರ ಸ್ಪರ್ಧೆಗೆ ಅವಕಾಶ ಇದೆ. ಅಧ್ಯಕ್ಷ ಸ್ಥಾನಕ್ಕೆ 11 ಸದಸ್ಯರು ಸ್ಪರ್ಧಿಸುವ ಅರ್ಹತೆ ಹೊಂದಿದ್ದಾರೆ. ಇದರಲ್ಲಿ ಎಂಟು ಮುಸ್ಲಿಂ ಮಹಿಳೆಯರು ಇದ್ದು ನಾಲ್ವರು ಹಿಂದು ಮಹಿಳೆಯರಿದ್ದಾರೆ. ಆರ್ಥಿಕವಾಗಿ ಪೈಪೋಟಿ ಇರುವ ಸಾಧ್ಯತೆ ಇಲ್ಲವಾಗಿದೆ ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿದೆ.
ಏನಾಗಲಿದೆ ಸಂಖ್ಯಾಬಲ?
ಜೆಡಿಎಸ್ನ 10 ಸದಸ್ಯರ ಪೈಕಿ 4 ಮಂದಿ ನೇರವಾಗಿ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿದ್ದರು. ಈಗ ನಮ್ಮ ಸಂಖ್ಯಾಬಲ ಬಿಜೆಪಿ ಮತ್ತು ಪಕ್ಷೇತರರು ಒಳಗೊಂಡು 13 ಇದ್ದು, ಶಾಸಕ ಮತ್ತು ಸಂಸದರ ಮತ ಸೇರಿ 15 ಆಗಲಿದೆ. ಕಾಂಗ್ರೆಸ್ನಲ್ಲಿ ಅಭ್ಯರ್ಥಿ ಘೋಷಣೆಯಾಗುತ್ತಿದ್ದಂತೆ ನಮ್ಮ ಕಡೆಗೆ 3ರಿಂದ 4 ಸದಸ್ಯರು ಬರಲಿದ್ದಾರೆ ಎಂಬ ಆಶಾಭಾವನೆಯಲ್ಲಿ ಜೆಡಿಎಸ್ ಮುಖಂಡರಿದ್ದಾರೆ. ಇನ್ನು ಕಾಂಗ್ರೆಸ್ನವರು ನಮ್ಮ ಸಂಖ್ಯೆಈಗ 20 ತಲುಪಿದೆ. ಜೆಡಿಎಸ್ ಕ್ಯಾಂಪ್ನಿಂದ ಇಬ್ಬರು ನಮ್ಮ ಕಡೆಗೆ ಜಿಗಿಯಲಿದ್ದಾರೆ ಎಂಬ ಉತ್ಸಾಹದಲ್ಲಿದ್ದಾರೆ.