ಅಗ್ನಿಶಾಮಕ ದಳದಲ್ಲಿ ಅಸಮಾಧಾನದ ಹೊಗೆ

11150203_932826613405794_8761314542746366540_n-960x600
Published on

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಸರ್ಕಾರಿ ಮೋಟಾರು ವಾಹನಗಳಿಗೆ ಫಿಟ್‌ನೆಸ್ ಮತ್ತು ರಿಜಿಸ್ಟ್ರೇಷನ್ ರಿನಿವಲ್ ಸರ್ಟಿಫಿಕೇಟ್ ಕೊಡಲು ರಾಜ್ಯಸಾರಿಗೆ ಇಲಾಖೆ ನಿರಾಕರಿಸುತ್ತಿರುವುದು ಅಗ್ನಿಶಾಮಕ ದಳಕ್ಕೆ ತಲೆನೋವು ತಂದೊಡ್ಡಿದೆ.

ಕಳೆದ ಏಪ್ರಿಲ್ ಒಂದರಿಂದ ಜಾರಿಯಾದ ಕೇಂದ್ರದ ಸೆಂಟ್ರಲ್ ಮೋಟಾರ್ ವೆಹಿಕಲ್ ಆ್ಯಕ್ಟ್(ತಿದ್ದುಪಡಿ)ಅಡಿ, 15 ವರ್ಷ ಅವಧಿ ಮೀರಿದ ಸರ್ಕಾರಿ ವಾಹನಗಳಿಗೆ ದೃಢೀಕರಣ ಪತ್ರ ಕೊಡಲು ಸಾಧ್ಯವಿಲ್ಲ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಅಲ್ಲದೆ ನಿರ್ದಿಷ್ಟ ಅವಧಿ ಮೀರಿದ ಸಾವಿರಾರು ಸರ್ಕಾರಿ ವಾಹನಗಳ ನೋಂದಣಿ ನವೀಕರಿಸದೆ, ಕ್ಯಾನ್ಸಲ್ ಮಾಡಿರುವುದು ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಗೆ ತೊಂದರೆ ತಂದಿದೆ.

ಕೇಂದ್ರದ ಹೊಸ ನೀತಿಯಿಂದ ಸಂಕಷ್ಟಕ್ಕೆ ಸಿಲುಕಿರುವಲ್ಲಿ ಪ್ರಮುಖವಾಗಿರುವುದು ಅಗ್ನಿಶಾಮಕ ದಳ. ಕಿರಿಕಿರಿ ತಪ್ಪಿಸಿಕೊಳ್ಳಲು ಅವಧಿ ಮೀರಿದ ವಾಹನಗಳನ್ನು ಓಡಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ನಿರಾಕರಿಸುತ್ತಿದ್ದಾರೆ. ರಕ್ಷಣೆ, ಆಂತರಿಕ ರಕ್ಷಣೆ, ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಾಹನಗಳಿಗೆ ಕಾನೂನು ಅನ್ವಯಿಸದು ಎಂದಿದ್ದರೂ, ಸಾರಿಗೆ ಇಲಾಖೆ ಅದನ್ನು ಪರಿಗಣಿಸದಿರುವುದು ಅಗ್ನಿಶಾಮಕದಳದ ಅಧಿಕಾರಿಗಳ ಕಣ್ಣು ಕೆಂಪಗಾಗಿಸಿದೆ.

ಜೀವ ಹಾಗೂ ಆಸ್ತಿಪಾಸ್ತಿ ರಕ್ಷಣೆ ಮತ್ತಿತರ ಕಾನೂನು ಸುವ್ಯವಸ್ಥೆಗೆ ಪೂರಕವಾಗಿ ಇಲಾಖೆ ಕೆಲಸ ಮಾಡುತ್ತಿದ್ದರೂ ಅವಧಿ ಮೀರಿದ ಅಗ್ನಿಶಾಮಕ ವಾಹನಗಳಿಗೆ ಎಫ್‌ಸಿ, ಆರ್‌ಸಿ ಸಿಗುತ್ತಿಲ್ಲ. ಸಿಬ್ಬಂದಿ ಇಂಥ ವಾಹನಗಳನ್ನು ಓಡಿಸಲು ನಿರಾಕರಿಸುತ್ತಿರುವುದರಿಂದ ತುರ್ತು ಸನ್ನಿವೇಶದಲ್ಲಿ ವಾಹನಗಳನ್ನು ಹೊಂದಿಸಲು ಪರದಾಡುವಂತಾಗಿದೆ ಎಂಬುದು ಇಲಾಖೆ ಮೂಲಗಳ ಅಳಲಾಗಿದೆ.

ಹೊಸ ನಿಯಮದಿಂದಾಗಿ ರಾಜ್ಯದಲ್ಲಿರುವ 216 ಅಗ್ನಿಶಾಮಕ ಠಾಣೆಗಳಲ್ಲಿರುವ ಸಾವಿರಾರು ವಾಹನಗಳ ಪೈಕಿ ಉತ್ತಮ ಕಂಡಿಷನ್‌ನಲ್ಲಿರುವ ಶೇ.50 ಕ್ಕೂ ಹೆಚ್ಚು ವಾಹನಗಳನ್ನು ಉಪಯೋಗಿಸಲು ಸಾಧ್ಯವಾಗುತ್ತಿಲ್ಲವಂತೆ. 4500 ಲೀಟರ್, 9 ಸಾವಿರ ಲೀಟರ್ ಮತ್ತು 16 ಸಾವಿರ ಲೀಟರ್ ಸಾಮರ್ಥ್ಯದ 400 ಕ್ಕೂ ಹೆಚ್ಚು ವಾಹನಗಳನ್ನು ಠಾಣೆಯಿಂದ ಹೊರಕ್ಕೆ ತೆಗೆಯಲು ಆಗುತ್ತಿಲ್ಲ.

ಸರ್ಕಾರ ಅನುದಾನ ಕೊಟ್ಟರೂ, ತಕ್ಷಣಕ್ಕೆ ಹೊಸ ವಾಹನ ಖರೀದಿಸಲು ಸಾಧ್ಯವಿಲ್ಲ. ಹೊಸ ವಾಹನ ಖರೀದಿಗೆ ಒಂದಿಷ್ಟು ಸಮಯಾವಕಾಶ ಬೇಕಾಗುತ್ತದೆ. ಆಗುತ್ತಿರುವ ತೊಂದರೆಯನ್ನು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ವಿವರಿಸಿದರೆ ಅವರು ಕೇಂದ್ರ ಸರ್ಕಾರದೆಡೆ ಬೊಟ್ಟು ಮಾಡುತ್ತಾರೆ.

ಈ ಕುರಿತು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆಂದು ಅಗ್ನಿಶಾಮಕದಳದ ಮೂ ಲಗಳು ತಿಳಿಸಿವೆ. ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ್ ಕೇಂದ್ರಕ್ಕೆ ಪತ್ರ ಬರೆದಿರುವುದನ್ನು ಖಚಿತಪಡಿಸಿದ್ದಾರೆ.

ಕೇಂದ್ರದ ಹೊಸ ನಿಯಮದಡಿ ರಾಜ್ಯಾದ್ಯಂತ ಕಳೆದ 2-3 ತಿಂಗಳಿಂದ, ಅಂದಾಜು 11 ಸಾವಿರ ಸರ್ಕಾರಿ ವಾಹನಗಳ ನೋಂದಣಿ ಕ್ಯಾನ್ಸಲ್ ಆಗಿವೆ. ಅವುಗಳ ನೋಂದಣಿ ನವೀಕರಿಸಿಲ್ಲ. ಈ ಕುರಿತು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಖಾಸಗಿ ವಾಹನಗಳಿಗೆ ಈ ಹೊಸ ನೀತಿ ಅನ್ವಯವಾಗದು ಎನ್ನುತ್ತಾರೆ ಬೆಂಗಳೂರು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಸಿ.ಮಲ್ಲಿಕಾರ್ಜುನ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net