ಅಂಗವಿಕಲರ ಮುಖದಲ್ಲಿ ಅರಳಿತು ನಗು

h20-Majhethiya
Published on

ಹುಬ್ಬಳ್ಳಿ: ಯಾವುದೋ ಕಾರಣಕ್ಕೆ ಕೈ-ಕಾಲು ಕಳೆದುಕೊಂಡಿದ್ದವರು ಜೀವನವೇ ಮುಗಿದು ಹೋಯಿತು ಎಂದು ಭಾವಿಸಿದ್ದರು. ಬಾಡಿದ ಮುಖ, ಕುಟುಂಬದ ನಗು ಮತ್ತೆ ಅರಳುವುದಿಲ್ಲ ಎಂದುಕೊಂಡಿದ್ದರು. ಆದರೆ, ಹುಬ್ಬಳ್ಳಿಯ ಮಜೇಥಿಯಾ ಫೌಂಡೇಷನ್ ವತಿಯಿಂದ ನಗರದ ಮೂರುಸಾವಿರ ಮಠದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ಕೃತಕ ಕೈ-ಕಾಲು ಜೋಡಣೆ ಶಿಬಿರದಲ್ಲಿ ಅಂಗವಿಕಲರ ಜೀವನದಲ್ಲಿ ನವೋತ್ಸಾಹ ಮೂಡಿತು.

ಕಲಬುರಗಿ, ಬೀದರ್, ವಿಜಯಪುರ, ಗದಗ, ಹಾವೇರಿ ಸೇರಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ 246 ಅಂಗವಿಕಲರು ಕೃತಕ ಕೈ-ಕಾಲು ಪಡೆದು ಹಸನ್ಮುಖಿಯಾದರು. ಇನ್ನು ಮುಂದೆ ನಾವು ಯಾರಿಗೂ ಭಾರವಾಗದಂತೆ ಬದುಕುವೆವು ಎಂಬ ಉತ್ಸಾಹ ಅವರಲ್ಲಿ ಕಂಡು ಬಂದಿತು.

ಕೆಲ ದಿನಗಳ ಹಿಂದೆ ಅಂಗವಿಕಲರ ಕೈ-ಕಾಲುಗಳ ಅಳತೆ ಪಡೆಯಲಾಗಿತ್ತು. ಹೈದರಾಬಾದ್​ನ ಭಾರತ್ ವಿಕಾಸ್ ಪರಿಷತ್ ಟ್ರಸ್ಟ್ ವತಿಯಿಂದ ಕೃತಕ ಕೈ-ಕಾಲುಗಳನ್ನು ಸಿದ್ಧಪಡಿಸಲಾಗಿತ್ತು. ಇಂದು 246 ಫಲಾನುಭವಿಗಳಿಗೆ ಜೋಡಣೆ ಮಾಡಿದ್ದು, ಮಜೇಥಿಯಾ ಫೌಂಡೇಷನ್​ನ ಸಮಾಜಮುಖಿ ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತವಾಯಿತು.

ಡಿಎಚ್​ಒ ಡಾ. ಶಶಿ ಪಾಟೀಲ ಮಾತನಾಡಿ, ಮಜೇಥಿಯಾ ಫೌಂಡೇಷನ್ ಸಮಾಜಮುಖಿ ಕಾರ್ಯಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಕೋವಿಡ್ ಸಂದರ್ಭದಲ್ಲಿ ಫೌಂಡೇಷನ್ ಅನೇಕರ ಜೀವ ಉಳಿಸಿದೆ ಎಂದರು.

ಕಿಮ್್ಸ ಆಥೋಪೆಡಿಕ್ ವಿಭಾಗದ ಮುಖ್ಯಸ್ಥ ಡಾ. ಸೂರ್ಯಕಾಂತ ಕಲ್ಲೂರಾಯ ಮಾತನಾಡಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳು, ಬದುಕುವ ದಾರಿ ಕಾಣುವಂತಾಗಲು ಫೌಂಡೇಷನ್​ನ ಸಹಕಾರ ಕಾರಣ ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಫೌಂಡೇಷನ್ ಅಧ್ಯಕ್ಷ ಜಿತೇಂದ್ರ ಮಜೇಥಿಯಾ ಮಾತನಾಡಿ, ನನ್ನೊಬ್ಬನಿಂದ ಏನೂ ಮಾಡಲು ಸಾಧ್ಯವಿಲ್ಲ. ನನಗೆ ನಮ್ಮ ತಂಡದ ಸಹಕಾರ ಬಹಳಷ್ಟು ಇದೆ. ಅವರ ಸಹಕಾರದಿಂದಲೇ ಇಷ್ಟೊಂದು ಕಾರ್ಯ ಮಾಡುತ್ತಿರುವುದು. ಈ ಶಿಬಿರಕ್ಕೆ ಬೇರೆ ಬೇರೆ ಜಿಲ್ಲೆಯಿಂದ ಜನರು ಬಂದಿದ್ದಾರೆ. ಇನ್ನು ಮುಂದೆ ಇನ್ನಷ್ಟು ಜನರು ಆಗಬಹುದು. ಹಾಗಾಗಿ, ಇಲ್ಲಿಯೇ ಒಂದು ಶಾಶ್ವತ ಕೃತಕ ಕಾಲು-ಕೈ ತಯಾರಿಸುವ ಘಟಕ ಮಾಡುವ ಚಿಂತನೆ ಇದೆ ಎಂದರು.

ಆಥೋಪೆಡಿಕ್ ಸರ್ಜನ್ ಡಾ. ಸಂದೀಪ ನೀರಲಗಿ ಅವರು, ಕೃತಕ ಕೈ-ಕಾಲು ಹಾಕಿಸಿಕೊಂಡವರು ಹೇಗೆ ನಡೆಯಬೇಕು? ಎಂಬುದರ ಕುರಿತು ಸಲಹೆಗಳನ್ನು ನೀಡಿದರು. ಇದಕ್ಕೂ ಪೂರ್ವದಲ್ಲಿ ಅತಿಥಿಗಳು ನಾಗರ ಪಂಚಮಿ ನಿಮಿತ್ತ ನಾಗಪ್ಪನ ಮೂರ್ತಿಗೆ ಹಾಲೆರೆದರು. ಫೌಂಡೇಷನ್​ನ ಅಧ್ಯಕ್ಷೆ ನಂದಿನಿ ಕಶ್ಯಪ್ ಮಜೇಥಿಯಾ, ಕಶ್ಯಪ್ ಮಜೇಥಿಯಾ, ಪದಾಧಿಕಾರಿಗಳಾದ ಡಾ. ರಮೇಶ ಬಾಬು, ಡಾ. ವಿ.ಬಿ. ನಿಟಾಲಿ, ಅಮರೇಶ ಹಿಪ್ಪರಗಿ, ಅಜಿತ್ ಕುಲಕರ್ಣಿ, ಮಂಜುನಾಥ ಭಟ್ ಇತರರು ಇದ್ದರು.

ಇಡೀ ಕುಟುಂಬದಿಂದ ಸಮಾಜಮುಖಿ ಕೆಲಸ

ಶಿಬಿರ ಉದ್ಘಾಟಿಸಿದ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಮಾತನಾಡಿ, ಮಜೇಥಿಯಾ ಫೌಂಡೇಷನ್ ಅಧ್ಯಕ್ಷ ಜಿತೇಂದ್ರ ಮಜೇಥಿಯಾ ಅವರ ಇಡೀ ಕುಟುಂಬ ಸಮಾಜಮುಖಿ ಕೆಲಸದಲ್ಲಿ ತೊಡಗಿದೆ. ಇವರ ಕೆಲಸ-ಕಾರ್ಯಗಳು ಇತರರಿಗೂ ಮಾದರಿ. ಜಿತೇಂದ್ರ ಅವರ ಜನ್ಮಭೂಮಿ ಮುಂಬೈ ಆಗಿದ್ದರೂ ಹುಬ್ಬಳ್ಳಿಯನ್ನು ಕರ್ಮಭೂಮಿ ಮಾಡಿಕೊಂಡು ಅನವರತ ಶ್ರಮಿಸುತ್ತಿದ್ದಾರೆ. ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಮೀಸಲಿಟ್ಟಿದ್ದಾರೆ. ಇವರೊಟ್ಟಿಗೆ ಪತ್ನಿ, ಮಗ, ಸೊಸೆ, ಮೊಮ್ಮಕ್ಕಳೂ ಕೈ ಜೋಡಿಸಿದ್ದಾರೆ. ಇದಕ್ಕಿಂತ ಮತ್ಯಾವ ಭಾಗ್ಯ ಬೇಕು ಎಂದು ಬಣ್ಣಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net