

ಇಲ್ಲಿ ಕಪ್ಪುಬಣ್ಣದ ಬೋರ್ಡ್ಗಳೇ ಇಲ್ಲ, ಸೀಮೆಸುಣ್ಣ, ಡಸ್ಟರ್ ಬಳಸಲ್ಲ. ಪ್ರೊಜೆಕ್ಟರ್ನ ಪಿಪಿಟಿ ಮೂಲಕವೇ ನಿತ್ಯ ನಡೆಯುತ್ತದೆ ಪಾಠ. ಕಣ್ಣೆದುರಿಗೆ ತಲೆ ಎತ್ತಿದೆ 5.5 ಎಕರೆಯ ಕೈದೋಟ. ಇಲ್ಲಿ ಬೆಳೆದ ತರಕಾರಿಯಲ್ಲೇ ಮಕ್ಕಳಿಗೆ ಬಿಸಿಯೂಟ. ತೋಟದಲ್ಲಿ ಬೆಳೆದ ವೈವಿಧ್ಯ ಹಣ್ಣುಗಳ ರುಚಿ ನೋಡುವ ಅವಕಾಶದ ಜತೆಗೆ ಯೋಗ, ಧ್ಯಾನ ಹಾಗೂ ಮಿನಿ ಜಿಮ್ ಸೌಲಭ್ಯವೂ ಉಂಟು.
ಇದು ಖಾಸಗಿ ಶಾಲೆಗಳನ್ನೂ ಮೀರಿಸುವ ಹೈಟೆಕ್ ಸೌಲಭ್ಯಗಳುಳ್ಳ ಸ್ಮಾರ್ಟ್ ಸರ್ಕಾರಿ ಪ್ರೌಢಶಾಲೆಯ ಚಿತ್ರಣ. ಸಿಎಂ ತವರು ಕ್ಷೇತ್ರ ಶಿಕಾರಿಪುರದ ಹರಗಿ ಗ್ರಾಮದ ಈ ಶಾಲೆ ಪಾಲಕರು, ದಾನಿಗಳು, ಎಸ್ಡಿಎಂಸಿ ಸದಸ್ಯರು, ಶಿಕ್ಷಕರ ಕೊಡುಗೆಯಿಂದಲೇ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೂ ಮಾದರಿಯಾಗಿದೆ. 8 ರಿಂದ ಎಸ್ಎಸ್ಎಲ್ಸಿವರೆಗೆ 119 ವಿದ್ಯಾರ್ಥಿಗಳಿದ್ದು, 15 ಕೊಠಡಿಗಳಿವೆ. ಈ ಪೈಕಿ ಮೂರಕ್ಕೆ ಸ್ಮಾರ್ಟ್ ಕ್ಲಾಸ್ ಉಪಕರಣ ಅಳವಡಿಸಲಾಗಿದೆ. ವಿದ್ಯುತ್ಗೆ ಪರ್ಯಾಯವಾಗಿ ಸೋಲಾರ್ ವ್ಯವಸ್ಥೆ ಮಾಡಿಕೊಂಡಿದ್ದು 11 ಕಂಪ್ಯೂಟರ್, 8 ಲ್ಯಾಪ್ಟಾಪ್, 3 ಪ್ರೊಜೆಕ್ಟರ್, 24ಗಿ7 ವಿದ್ಯುತ್ ವ್ಯವಸ್ಥೆಯೊಂದಿಗೆ ಪಿಪಿಟಿ ಮೂಲಕ ಬೋಧನೆ ಮಾಡಲಾಗುತ್ತಿದೆ. ಶಿಕ್ಷಕರು ಸಮಾಜ ವಿಜ್ಞಾನ, ವಿಜ್ಞಾನ, ಗಣಿತ ವಿಷಯಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಯೂಟ್ಯೂಬ್ನಲ್ಲಿ ಡೌನ್ಲೋಡ್ ಮಾಡಿ ಮಕ್ಕಳಿಗೆ ಪಾಠ ಮಾಡುತ್ತಾರೆ. ಚಿತ್ರಕಲಾ ಗ್ಯಾಲರಿ, ಕಂಪ್ಯೂಟರ್ ಲ್ಯಾಬ್, ಸುಸಜ್ಜಿತ ಗ್ರಂಥಾಲಯವೂ ಇಲ್ಲಿದೆ.
ಪ್ರತಿ ವಿದ್ಯಾರ್ಥಿಯೂ ವಾರದಲ್ಲಿ 2 ಗಂಟೆ ವ್ಯಾಯಾಮ ತರಗತಿಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ಸೈಕ್ಲಿಂಗ್, ವೇಟ್ಲಿಫ್ಟಿಂಗ್, ಡಂಬಲ್ಸ್, ಹರ್ಡಲ್ಸ್ ಒಳಗೊಂಡ ಮಿನಿ ಜಿಮ್ ಸೌಲಭ್ಯ ಮಾಡಿಕೊಳ್ಳಲಾಗಿದೆ.
ಶಾಲೆಯ ಕೈದೋಟದಲ್ಲಿಯೇ ಬೆಳೆಯುವ ತರಕಾರಿಗಳು ವಾರದಲ್ಲಿ ಮೂರು ದಿನದ ಅಡುಗೆಗೆ ಬಳಕೆಯಾಗುತ್ತಿವೆ. 80 ಸಪೋಟಾ, 60 ಮಾವು, 50 ತೆಂಗು, ಸೀಬೆ, ಬಾಳೆ, ಹುಣಸೆ, ನೆಲ್ಲಿಕಾಯಿ, ಪಪ್ಪಾಯ ಗಿಡಗಳು ಇಲ್ಲಿದ್ದು, ಬೆಳೆದ ಹಣ್ಣುಗಳನ್ನು ಮಕ್ಕಳಿಗೆ ನೀಡಲಾಗುತ್ತದೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ ಹೆಚ್ಚಿಸಲು ಪ್ರತಿದಿನ ಅರ್ಧ ಗಂಟೆ ಧ್ಯಾನ, ಪ್ರಾಣಾಯಾಮ ಮಾಡಿಸಲಾಗುತ್ತಿದೆ. ಪ್ರತಿ ಶನಿವಾರ 1 ತಾಸು ಯೋಗಾಭ್ಯಾಸ ಇರುತ್ತದೆ. ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡುವುದು, ಫೋನ್ನಲ್ಲಿ ಪಾಲಕರೊಂದಿಗೆ ರ್ಚಚಿಸಿ ಗೈರುಹಾಜರಾಗದಂತೆ ನಿಗಾ ವಹಿಸಲಾಗುತ್ತಿದೆ.
ಈ ಶಾಲೆಗೆ ಕಂಪ್ಯೂಟರ್ ಶಿಕ್ಷಕ ಹುದ್ದೆ ಮಂಜೂರಾಗದಿದ್ದರೂ ಶಾಲಾಭಿವೃದ್ಧಿ ಸಮಿತಿಯಿಂದಲೇ ಶಿಕ್ಷಕರನ್ನು ನೇಮಕ ಮಾಡಿಕೊಂಡು ವೇತನ ನೀಡಲಾಗುತ್ತಿದೆ. ಶಾಲೆಯ ಹಳೆಯ ವಿದ್ಯಾರ್ಥಿಯೊಬ್ಬರು ಲಕ್ಷ ರೂ. ವೆಚ್ಚದ ಸೋಲಾರ್ ಸಿಸ್ಟಮ್ ಕೊಡುಗೆ ನೀಡಿದ್ದಾರೆ.
ದಾನಿಗಳು, ಪಾಲಕರ ನೆರವಿನಿಂದ ಗುಣಮಟ್ಟದ ಶಿಕ್ಷಣವನ್ನು ನೀಡಿ ಯಶಸ್ವಿಯಾಗಿದ್ದೇವೆ. | ಎಸ್.ನಾಗರಾಜ್ ಮುಖ್ಯ ಶಿಕ್ಷಕ
| ನವೀನ್ ಬಿಲ್ಗುಣಿ, ಶಿವಮೊಗ್ಗ